ವ್ಯಕ್ತಿ ಸಾವು, ಕುಡಿವ ನೀರಿನ ಕೆರೆ ಖಾಲಿ

ಹುಬ್ಬಳ್ಳಿ- ವ್ಯಕ್ತಿಯೋರ್ವ ಕೆರಯಲ್ಲಿ ಮುಳುಗಿ ಸಾವನ್ನಪ್ಪಿದ ಕಾರಣ, ಇಡೀ ಕೆರೆಯ ನೀರನ್ನೆ ಖಾಲಿ ಮಾಡಿದ ಘಟನೆ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನ್ಯಾವಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 15ರಂದು ನ್ಯಾವಳ್ಳಿ ಗ್ರಾಮದ ಕೆರೆಯಲ್ಲಿ ನವಲಗುಂದ ತಾಲೂಕಿನ ಶಲವಡಿ ಗ್ರಾಮದ ಪರಶುರಾಮ್ ತಳವಾರ್ ಎಂಬ ವ್ಯಕ್ತಿ ಬಿದ್ದು ಸಾವನ್ನಪ್ಪಿದ್ದ. ಇದನ್ನ ಇಡೀ ಗ್ರಾಮದ ಜನರು ನೋಡಿದ್ದರು. ಇನ್ನು ಬಿದ್ದ ವ್ಯಕ್ತಿಯ ಬಾಯಿ ಹಾಗೂ ಕಿವಿಯಿಂದ ರಕ್ತ ಬಂದು ಕೆರೆಯ ನೀರಿನಲ್ಲಿ ಕೂಡಿಕೊಂಡಿತ್ತು. ಇದನ್ನೆಲ್ಲ ನೋಡಿದ್ದ ಜನರು ಈ ಕೆರೆಯ ನೀರು ಕುಡಿಯಲು ನಿರಾಕರಿಸಿದರು. ಈ ಹಿನ್ನೆಲೆ ನ್ಯಾವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕೆರೆಯ ನೀರನ್ನೇ ಖಾಲಿ ಮಾಡುವ ನಿರ್ಧಾರಕೈಗೊಂಡು, ಸದ್ಯ 13 ನೀರೆತ್ತುವ ಮೋಟರ್‌ಗಳಿಂದ ಕೆರೆಯಿಂದ ನೀರು ತೆಗೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಈ ನೀರನ್ನ ತೆಗೆಯಲಾಗುತ್ತಿದ್ದು, ಮಲಪ್ರಭಾ ಬಲದಂಡೆ ಕಾಲುವೆಗೆ ಈ ನೀರನ್ನ ಬಿಡಲಾಗುತ್ತಿದೆ. ಕಳೆದ 6ತಿಂಗಳ ಹಿಂದೆಯಷ್ಟೇ ಇದೇ ಕಾಲುವೆಯಿಂದ ಈ ಕೆರೆಗೆ ನೀರನ್ನ ತುಂಬಿಸಿಕೊಳ್ಳಲಾಗಿತ್ತು. ಇನ್ನು ಇದೇ ಕೆರೆಯ ನೀರು ಈ ಗ್ರಾಮದ ಜನರಿಗೆ ಆಶ್ರಯವಾಗಿತ್ತು. ಸದ್ಯ ನೀರು ಖಾಲಿ ಆದ ಮೇಲೆ ಈ ಗ್ರಾಮದ ಜನರಿಗೆ ಕುಡಿಯುವ ನೀರಿನ ಚಿಂತೆಯಾಗಿದೆ. ಇನ್ನೂ ಶುದ್ಧ ಕುಡಿಯುವ ನೀರಿನ ಘಟಕ ಇದ್ರೂ ಜನರು ಇದೇ ಕೆರೆಯ ಮೇಲೆ ಅವಲಂಬಿತರಾಗಿದ್ರು. ಈ ಕೆರೆ ನೀರು ಸಾವನ್ನಪ್ಪಿದ ವ್ಯಕ್ತಿಯಿಂದ ಕಲುಷಿತವಾಗಿದ್ರೂ, ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಜನರ ಆಕ್ರೋಶ ವ್ಯಕ್ತಪಡಿಸ್ತಿದಾರೆ. ಮೃತ ವ್ಯಕ್ತಿ ಎಸ್ಟಿ ಸಮುದಾಯಕ್ಕೆ ಸೇರಿದವನಾಗಿದ್ರಿಂದಲೇ ಕೆರೆ ನೀರನ್ನ ಖಾಲಿ ಮಾಡಲಾಗಿದೆ ಅಂತಾ ಕೆಲವರು ಆರೋಪಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ