ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ಸತ್ಯನಾರಾಯಣ ಆಯ್ಕೆ ಬಹುತೇಕ ಖಚಿತ

 

ಬೆಂಗಳೂರು, ಜೂ.22- ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಶಿರಾ ಕ್ಷೇತ್ರದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಸಭಾಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ, ಉಪಸಭಾಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಒಪ್ಪಂದವಾಗಿತ್ತು. ಅದರಂತೆ ಉಭಯ ಪಕ್ಷಗಳು ಸೇರಿ ಹಿರಿಯ ಶಾಸಕರಾದ ರಮೇಶ್‍ಕುಮಾರ್ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿತ್ತು.

ಹಾಲಿ ಇರುವ ಉಪಸಭಾಧ್ಯಕ್ಷ ಸ್ಥಾನಕ್ಕೆ ಸತ್ಯನಾರಾಯಣ ಅವರನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದು, ಮುಂಬರುವ ಅಧಿವೇಶನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಉಭಯ ಪಕ್ಷಗಳು ಸೇರಿ ಇವರನ್ನು ಆಯ್ಕೆ ಮಾಡಲಿವೆ ಎಂದು ತಿಳಿದು ಬಂದಿದೆ.
ವಿಧಾನಪರಿಷತ್ ಸಭಾಪತಿ ಸ್ಥಾನ ಜೆಡಿಎಸ್‍ಗೆ ಹಾಗೂ ಉಪಸಭಾಪತಿ ಸ್ಥಾನ ಕಾಂಗ್ರೆಸ್‍ಗೆ ಎಂಬ ತೀರ್ಮಾನದಂತೆ ಜೆಡಿಎಸ್‍ನ ಹಿರಿಯ ಸದಸ್ಯರಾದ ಬಸವರಾಜಹೊರಟ್ಟಿ ಅವರು ಸಭಾಪತಿಯಾಗುವುದು ಬಹುತೇಕ ಖಚಿತವಾಗಿದೆ.

ಉಪಸಭಾಪತಿಯಾಗಿ ಕಾಂಗ್ರೆಸ್‍ನಿಂದ ಯಾರಾಗಲಿದ್ದಾರೆ ಎಂಬುದು ಸದ್ಯದಲ್ಲೇ ತೀರ್ಮಾನವಾಗಲಿದೆ. ಕಾಂಗ್ರೆಸ್‍ನಲ್ಲಿ ಸದಸ್ಯರು ಹೆಚ್ಚಾಗಿರುವುದರಿಂದ ನಮಗೇ ಸಭಾಪತಿ ಸ್ಥಾನ ನೀಡಬೇಕೆಂದು ಕೆಲವರು ಒತ್ತಾಯ ಮಾಡಿದ್ದಾರೆ ಎನ್ನಲಾಗಿದ್ದು, ಮೈತ್ರಿ ಒಪ್ಪಂದದಂತೆ ಆಯ್ಕೆ ನಡೆಯಬೇಕಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಅಧಿವೇಶನದಲ್ಲಿ ಬಸವರಾಜಹೊರಟ್ಟಿ ಅವರು ಮೇಲ್ಮನೆ ಸಭಾಪತಿಯಾಗಿ, ಸತ್ಯನಾರಾಯಣ ಅವರು ವಿಧಾನಸಭೆ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ