ನವದೆಹಲಿ, ಜೂ.22-ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪ್ರಗತಿ ಗುರಿ ಸಾಧನೆ ಧ್ಯೇಯದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವ ವ್ಯಾಪಾರದಲ್ಲಿ ಭಾರತದ ಪಾಲು ಶೇ.3.4ರಷ್ಟು ಹೆಚ್ಚಾಗಬೇಕೆಂಬ ನಿಲುವನ್ನೂ ವ್ಯಕ್ತಪಡಿಸಿದ್ದಾರೆ.
ರಾಜಧಾನಿಯಲ್ಲಿ ವಾಣಿಜ್ಯ ಸಚಿವಾಲಯದ ಹೊಸ ಕಚೇರಿ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು,2017-18ರ ವಿತ್ತ ವರ್ಷದ ಕೊನೆ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ಶೇ.7.7ರಷ್ಟು ತಲುಪಿದೆ. ಈಗ ಅದನ್ನು ಶೇ.7.8ಕ್ಕಿಂತ ಆಚೆಗೆ ಕೊಂಡೊಯ್ಯಬೇಕಾದ ಸಮಯ ಬಂದಿದ್ದು, ಎರಡಂಕಿ ವಿಸ್ತರಣೆಗೆ ಗುರಿ ಹೊಂದಲಾಗಿದೆ ಎಂದರು.
ತನ್ನ ಸದೃಢ ಆರ್ಥಿಕತೆ ದ್ವಿಗುಣದ ಮೂಲಕ ಭಾರತವು 5 ಲಕ್ಷ ಕೋಟಿ ಕ್ಲಬ್‍ಗೆ ಸೇರ್ಪಡೆಯಾಗುವುದನ್ನು ನೋಡಲು ತಾವು ಕಾತುರರಾಗಿದ್ದೇವೆ ಎಂದು ಪ್ರಧಾನಿ ಭಾವೋದ್ವೇಗದಿಂದ ನುಡಿದರು.
ಅದೇ ರೀತಿ ವಿಶ್ವ ವ್ಯಾಪಾರದಲ್ಲಿ ದೇಶದ ಪಾಲು ಶೇ.3.4ರಷ್ಟು ಹೆಚ್ಚಾಗಬೇಕು. ಈ ಗುರಿಸಾಧನೆಗಾಗಿ ಕೂಡ ತಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಮೋದಿ ತಿಳಿಸಿದರು.
ಅಭಿವೃದ್ದಿ ಕಾರ್ಯವನ್ನು ವಿಳಂಬ ಮಾಡುವ ಸಂಸ್ಕøತಿಯಿಂದ ಭಾರತ ದೂರಸರಿದಿದೆ ಎಂದು ಹೆಮ್ಮೆಯಿಂದ ಹೇಳಿದ ಅವರು, ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು. ಜಿಎಸ್‍ಟಿ ಜಾರಿ ವಾಣಿಜ್ಯ ಮತ್ತು ವಹಿವಾಟಿನಲ್ಲಿ ಹೊಸ ಪರಿವರ್ತನೆಗೆ ನಾಂದಿಯಾಗಿದೆ. ಹೊಸದಾಗಿ 54 ಲಕ್ಷ ನೇರ ತೆರಿಗೆದಾರರು ಈ ವ್ಯವಸ್ಥೆ ಅಡಿ ನೋಂದಾಯಿತರಾಗಿದ್ದಾರೆ ಎಂದು ವಿವರಿಸಿದರು.