ಫರ್ವೇಜ್ ಮುಷರ್ರಫ್ ಹೇಳಿರುವುದು ಸರಿ ಇದೆ ಎಂಬ ಹೇಳಿಕೆ ಮೂಲಕ, ಸೈಫುದ್ದೀನ್ ಸೋಜ್ ಹೊಸ ವಿವಾದ

ನವದೆಹಲಿ, ಜೂ.22- ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂಬ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಹೇಳಿರುವುದು ಸರಿ ಇದೆ ಎಂಬ ಹೇಳಿಕೆ ಮೂಲಕ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಸೈಫುದ್ದೀನ್ ಸೋಜ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರವನ್ನು ಪಾಕಿಸ್ತಾನದಲ್ಲಿ ವಿಲೀನಗೊಳಿಸಲು ಮುಷರ್ರಫ್ ಬಯಸಿರಲಿಲ್ಲ. ಆದರೆ, ಆ ರಾಜ್ಯಕ್ಕೆ ಸಂಪೂರ್ಣ ಸ್ವಾಯತ್ಥತೆ ಬೇಕು ಎಂದು ಹೇಳಿದ್ದರೂ ಅವರ ಮಾತು ಇಂದಿಗೂ ಸತ್ಯ ಎಂದು ತಿಳಿಸಿದ್ದರು. ಸೋಜ್ ಅವರ ಈ ಹೇಳಿಕೆಯಿಂದ ಕಾಂಗ್ರೆಸ್‍ಗೆ ಇರಿಸು ಮುರಿಸು ಉಂಟಾಗಿದ್ದು, ಮುಷರ್ರಫ್ ಅವರನ್ನು ಬೆಂಬಲಿಸಿರುವ ಇವರ ವರ್ತನೆಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಈ ಹಿಂದೆ ಇವರು ಕುಖ್ಯಾತ ಉಗ್ರಗಾಮಿ ಬಹರಿದ್ದೀನ್‍ವಾನಿಯನ್ನು ಭದ್ರತಾ ಪಡೆಗಳು ಕೊಲ್ಲಬಾರದಿತ್ತು ಎಂಬ ವಿವಾದಿತ ಹೇಳಿಕೆ ನೀಡಿದ್ದರು. ಮುಂದಿನ ವಾರ ಇವರು ಕಾಶ್ಮೀರ ಕುರಿತು ಬರೆದ ಪುಸ್ತಕ ಬಿಡುಗಡೆಯಾಗಲಿದ್ದು, ಅದರಲ್ಲಿ ಮತ್ತಷ್ಟು ವಿವಾದಾತ್ಮಕ ಅಂಶಗಳು ಇರುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ