ಮಾಸ್ಕೋ: ಫೀಫಾ ವಿಶ್ವಕಪ್ ಫುಟ್ಬಾಲ್ 2018ರ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಅರ್ಜೆಂಟೀನಾ ತಂಡವನ್ನು ಕ್ಷಮಿಸುವಂತೆ ಕೋಚ್ ಸಂಪೋಲಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ನಿನ್ನೆ ನಡೆದ ಲೀಗ್ ಹಂತದ ಪಂದ್ಯದಲ್ಲಿ ಕ್ರೋವೇಶಿಯಾ ವಿರುದ್ಧ 3-0 ಅಂತರದಲ್ಲಿ ಹೀನಾಯವಾಗಿ ಸೋತ ಬಳಿಕ ಅರ್ಜೆಂಟೀನಾದ ನಾಕೌಟ್ ಹಂತ ಕಠಿಣವಾಗಿದ್ದು, ಅಭಿಮಾನಿಗಳು ತಂಡದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅರ್ಜೆಂಟೀನಾ ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅರ್ಜೆಂಟೀನಾ ತಂಡದ ಕೋಚ್ ಸಂಪೋಲಿ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.
ನಿಜಕ್ಕೂ ನಮಗೆ ನೋವಾಗುತ್ತಿದೆ. ಅರ್ಜೆಂಟೀನಾ ತಂಡಕ್ಕೆ ನಾನು ಸುಧೀರ್ಘ ಅವಧಿಯಿಂದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಸಂಪೂರ್ಣ ಅನುಭವವನ್ನು ಸದ್ಬಳಕೆ ಮಾಡಿಕೊಂಡು ಆಟಗಾರರಿಗೆ ತರಬೇತಿ ನೀಡಿದ್ದೇನೆ. ಇಷ್ಟಾಗಿಯೂ ತಂಡದ ಪ್ರದರ್ಶನ ಸಮಾಧಾನಕರವಾಗಿಲ್ಲ. ಕ್ರೊವೇಷಿಯಾ ವಿರುದ್ಧದ ಪಂದ್ಯದಲ್ಲಿ ನನ್ನ ಗೇಮ್ ಪ್ಲಾನ್ ಗಳು ಫಲಿಸಲಿಲ್ಲ. ನಮಗಿರುವ ಒಂದೇ ಒಂದು ಕೊನೆಯ ಅವಕಾಶವನ್ನು ಪರಿಣಾಮಕಾರಿಯಾಗಿ ಸದ್ಭಳಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ತಂಡದ ಪ್ರದರ್ಶನದ ಸಂಪೂರ್ಣ ಹೊಣೆ ನನ್ನದೇ.. ಟೂರ್ನಿಗೂ ಮೊದಲು ಅರ್ಜೆಂಟೀನಾ ಅಭಿಮಾನಿಗಳಲ್ಲಿದ್ದ ಆಸೆ ನನ್ನನ್ನು ಕಾಡಿಸುತ್ತಿದೆ. ತಂಡದ ಜೆರ್ಸಿ ತೊಟ್ಟಾಗ ಆ ನೋವು ಏನು ಎಂದು ನನಗೆ ಅರ್ಥವಾಗುತ್ತಿದೆ. ಟೂರ್ನಿಯಲ್ಲಿ ನಮ್ಮ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಆದರೆ ಒಂದಂತೂ ಸತ್ಯ.. ನನ್ನ ಶಕ್ತಿ ಮೀರಿ ನಾನು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ.