ವಿಶ್ವಸಂಸ್ಥೆ, ಜೂ.21-ವಿಶ್ವಸಂಸ್ಥೆಗೆ ಯೋಗ ಬಹು ಐಚ್ಚಿಕ ವಿಷಯ ಎಂದು ಬಣ್ಣಿಸಿರುವ ಸಂಯುಕ್ತ ರಾಷ್ಟ್ರಗಳ ಉಪ ಮಹಾ ಪ್ರಧಾನ ಕಾರ್ಯದರ್ಶಿ ಅಮಿನಾ ಮಹಮದ್, ಇಂದಿನ ಒತ್ತಡ ಮತ್ತು ಭ್ರಮೆಯ ಸಂಕೀರ್ಣ ವಿಶ್ವದಲ್ಲಿ ದೇಹ ಮತ್ತು ಮನಸ್ಸಿನ ಶಾಂತಿ-ಸೌಖ್ಯತೆಗೆ ಯೋಗ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ. ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಅವರು, ಇಂದಿನ ಜಗತ್ತು ವಿಪರೀತ ಒತ್ತಡ ಮತ್ತು ಭ್ರಮೆಗಳಿಂದ ಸಂಕೀಣವಾಗಿದೆ. ಇಂಥ ಸನ್ನಿವೇಶದಲ್ಲಿ ಭಾರತದ ಪ್ರಾಚೀನ ದೈಹಿಕ ಮತ್ತು ಮಾನಸಿಕ ಚಿಕಿತ್ಸಾ ಪದ್ಧತಿಯಾದ ಯೋಗ ಉಪಶಮನಕ್ಕೆ ಮಾರ್ಗವಾಗಿದೆ ಎಂದು ವ್ಯಾಖ್ಯಾನಿಸಿದರು.
ವಿಶ್ವಸಂಸ್ಥೆಯಲ್ಲಿ ಯೋಗಾಭ್ಯಾಸ : ವಿಶ್ವಸಂಸ್ಥೆಯ ರಾಯಭಾರಿಗಳು, ರಾಜತಾಂತ್ರಿಕರು, ಧಾರ್ಮಿಕ ನಾಯಕರು, ವಿವಿಧ ಸಾಮಾಜಿಕ ಸಂಘಟನೆಗಳ ಸದಸ್ಯರು ಹಾಗೂ ಮಕ್ಕಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಎರಡು ಗಂಟೆಗಳ ಕಾಲ ಯೋಗಾಭ್ಯಾಸ ನಡೆಯಿತು.