ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ

 

ಬೆಂಗಳೂರು, ಜೂ.21-ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆಗಳು ಹಾನಿಗೊಳಗಾಗಿವೆ, ಬಹಳಷ್ಟು ಕಡೆ ಗುಂಡಿ ಬಿದ್ದಿವೆ. ಅವುಗಳನ್ನು ಮುಚ್ಚಿ ಸಂಚಾರ ಸುಗಮಗೊಳಿಸುವ ಅಗತ್ಯವಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಸದ್ಯಕ್ಕೆ ಗುಂಡಿಗಳಿಗೆ ಜಲ್ಲಿ ಹಾಕಿ ಮುಚ್ಚಬೇಕು. ಮಳೆಗಾಲದ ನಂತರ ಡಾಂಬರೀಕರಣ ಮಾಡುವಂತೆ ಸೂಚಿಸಲಾಗಿದೆ ಎಂದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು 8 ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಟೆಂಡರ್ ಕರೆಯಲಾಗಿದೆ. ಶೀಘ್ರವೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
2016ರಿಂದ 2018ರವರೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇಂದ್ರ ರಸ್ತೆ ನಿಧಿಯಿಂದ 7ಸಾವಿರ ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಮಂಜೂರಾತಿ ನೀಡಿದೆ. ಆದರೆ ಪ್ರತಿವರ್ಷ ಕೇವಲ 500 ಕೋಟಿ ಮಾತ್ರ ನೀಡುತ್ತಿದೆ. ಕೇಂದ್ರದ ಅನುದಾನವನ್ನೇ ಕಾಯುತ್ತಾ ಕುಳಿತರೆ 7 ಸಾವಿರ ಕೋಟಿ ರೂ. ಮೌಲ್ಯದ ರಸ್ತೆ ಕಾಮಗಾರಿ ಪೂರ್ಣಗೊಳಿಸಲು 14 ವರ್ಷ ಸಮಯ ಬೇಕು. ಹೀಗಾಗಿ ಕರ್ನಾಟಕಕ್ಕೆ ವಿಶೇಷವಾಗಿ ಅನುದಾನ ಕೊಡಿಸಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಸಂಸದರಿಗೆ ಮನವಿ ಮಾಡಲಾಗಿದೆ. ಶೀಘ್ರವೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಂಸದರ ಸಭೆಯನ್ನು ನಡೆಸಲು ತಯಾರಿ ನಡೆದಿದೆ ಎಂದು ಹೇಳಿದರು.

ಮಡಿಕೇರಿಯಿಂದ ಮಂಗಳೂರು ನಡುವಿನ ರಸ್ತೆಯ ಪೈಕಿ ಸೊಂಪಾಂಜೆವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗಿದೆ. ಸೊಂಪಾಂಜೆಯಿಂದ ಮಂಗಳೂರಿನ ಮಾಣೆವರೆಗಿನ ರಸ್ತೆಯನ್ನು ಇದೇ 30 ರಂದು ಹಸ್ತಾಂತರ ಮಾಡಲಾಗುವುದು.
ಚಾರ್ಮಾಡಿ ಘಾಟ್ ರಸ್ತೆ ಅಭಿವೃದ್ಧಿಗೆ ಅಗತ್ಯವಾದ ಅನುದಾನ ನೀಡಲು ಸರ್ಕಾರ ಸಿದ್ಧವಿದ್ದು, ಮುಂಜಾಗ್ರತಾ ಕ್ರಮಕೈಗೊಳ್ಳುವಂತೆÉ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಅಗತ್ಯವಿರುವ ಕಡೆ ಮರಗಳನ್ನು ತೆರವುಗೊಳಿಸಬೇಕು, ಭೂ ಕುಸಿತದ ಮುನ್ಸೂಚನೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಕೊಡಗಿನಿಂದ ಕೇರಳದ ತಲಚೇರಿಗೆ ಸಂಪರ್ಕ ಕಲ್ಪಿಸುವ ಅಂತರ್‍ರಾಜ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಸಾರ್ವಜನಿಕರು ಸುಮಾರು 150 ಕಿ.ಮೀ. ಸುತ್ತಿ ಬಳಸಿ ಪ್ರಯಾಣ ಮಾಡಬೇಕಿದೆ. ಅದಕ್ಕಾಗಿ ತಾತ್ಕಲಿಕವಾಗಿ ಐದಾರು ದಿನದಲ್ಲಿ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಸೂಚಿಸಿದ್ದೇನೆ. ಸುಮಾರು 8.20 ಕೋಟಿ ರೂ. ಅನುದಾನದ ಅಗತ್ಯವಿದ್ದು, ಅದನ್ನು ಘಟನೋತ್ತರ ಅನುಮತಿ ಕೊಡಿಸುವ ಭರವಸೆ ನೀಡಿದ್ದೇನೆ ಎಂದರು.
ಹುಬ್ಬಳ್ಳಿ-ಧಾರವಾಡದ ರಸ್ತೆ ಸುಮಾರು ಏಳೆಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಅದನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಲಾಗಿದೆ. ಮೈಸೂರು-ಬೆಂಗಳೂರು 8 ಪಥದ ರಸ್ತೆ ನಿರ್ಮಾಣಕ್ಕೆ ಅರಣ್ಯ ಮತ್ತು ಇಂಧನ ಇಲಾಖೆಯ ಸಹಕಾರ ಬೇಕಿದೆ. ಇಂಧನ ಇಲಾಖೆ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಶೇ.2.5ರಷ್ಟು ಬದಲಾಗಿ ಶೇ.15ರಷ್ಟು ಹಣ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಅದನ್ನು ಕಡಿಮೆ ಮಾಡಿಸಲು ಪ್ರಯತ್ನಿಸಲಾಗುವುದು, ಇನ್ನೂ ಏಳೆಂಟು ದಿನಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಎಂದರು.
ಬಿಳಿಕೆರೆ-ಹಾಸನ-ಬೇಲೂರು ರಸ್ತೆ, ತುಮಕೂರು-ಶಿವಮೊಗ್ಗ 8 ಪಥದ ರಸ್ತೆ ಮತ್ತು ಸಿಗಂಧೂರು ಕ್ಷೇತ್ರಕ್ಕೆ ತೆರಳುವ ಶರಾವತಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಕಾಮಗಾರಿಗೆ ಶೀಘ್ರವೇ ಆರಂಭಿಸಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ