ಬೆಂಗಳೂರು, ಜೂ.21-ಲೋಕಸಭೆ ಚುನಾವಣೆಗೆ ಸ್ಥಾನ ಹಂಚಿಕೆ, ಕೆಪಿಸಿಸಿ ಅಧ್ಯಕ್ಷಗಾದಿ ಪಡೆಯುವ ಸಂಬಂಧ ರಾಜ್ಯ ಕಾಂಗ್ರೆಸ್ ಸಂಸದರು ಮಹತ್ವದ ಸಭೆ ನಡೆಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರವಿರುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಎಲ್ಲಿ ನಮ್ಮ ಸ್ಥಾನಕ್ಕೆ ಕುತ್ತು ಬರುತ್ತದೋ ಎಂದು ಆತಂಕಕ್ಕೊಳಗಾಗಿರುವ ಹಲವು ಸಂಸದರು ಚರ್ಚೆ ನಡೆಸಿದ್ದಾರೆ.
ಹಳೇ ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಹೈಕಮಾಂಡ್ ನಾಯಕರು ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಲ್ಲಿ ಒಪ್ಪಿಗೆ ನೀಡುತ್ತಾರೋ ಎಂಬ ಆತಂಕ ಹಾಲಿ ಕಾಂಗ್ರೆಸ್ ಸಂಸದರಿಗೆ ಶುರುವಾಗಿದೆ.
ಯಾವುದೇ ಕಾರಣಕ್ಕೂ ಇಲ್ಲಿ ಮೈತ್ರಿ ಅಭ್ಯರ್ಥಿಗೆ ಅವಕಾಶ ನೀಡಬಾರದು ಎಂಬ ಹಿನ್ನೆಲೆಯಲ್ಲಿ ಸಂಸದರಾದ ಕೆ.ಎಚ್.ಮುನಿಯಪ್ಪ, ಚಂದ್ರಪ್ಪ, ಬಿ.ವಿ.ನಾಯಕ್, ಬಿ.ಸಿ.ಚಂದ್ರಶೇಖರ್, ಪ್ರಕಾಶ್ ಹುಕ್ಕೇರಿ, ಎಲ್.ಹನುಮಂತಯ್ಯ ಸೇರಿದಂತೆ ಹಲವರು ಸಭೆ ಸೇರಿ ಚರ್ಚಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ, ರಾಯಚೂರು ಸೇರಿದಂತೆ 12 ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಪಕ್ಷ ಬೇಡಿಕೆ ಇಟ್ಟಿದೆ. 15 ಸ್ಥಾನಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವುದಾಗಿ ಹೇಳಿದೆ. ಹಾಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಮುಂತಾದ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನ ಸಂಸದರೇ ಇದ್ದಾರೆ. ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಸಂಸದರಿದ್ದಾರೆ.
ಹಾಸನ, ಮಂಡ್ಯ, ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳನ್ನು ಬಿಟ್ಟುಕೊಡಬಹುದು. ಅದನ್ನು ಹೊರತುಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಲವಾಗಿಯೇ ಇದೆ. ಈ ಮೂಲಕ ನಮ್ಮ ಪಕ್ಷವನ್ನು ಗಟ್ಟಿಗೊಳಿಸಬೇಕು ಎಂದು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರಿನಲ್ಲೂ ಕೂಡ ಜನರ ಒಲವು ಕಾಂಗ್ರೆಸ್ ಪರವಾಗಿದೆ. ಇಲ್ಲೂ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಸೂಕ್ತ. ಎಲ್ಲರೂ ಚರ್ಚಿಸಿ ಒಮ್ಮತದ ತೀರ್ಮಾನವನ್ನು ಹೈಕಮಾಂಡ್ ಗಮನಕ್ಕೆ ತರಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.
ಒಟ್ಟಾರೆ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎದುರಿಸಬೇಕೆಂಬ ತೀರ್ಮಾನಕ್ಕೆ ಆರಂಭದಲ್ಲೇ ಅಪಸ್ವರ ಎದುರಾದಂತೆ ಕಂಡುಬಂದಿದೆ.
ಸ್ಥಾನ ಹಂಚಿಕೆ ವಿಷಯ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಆದರೆ ಲೋಕಸಭೆ ಸ್ಥಾನಗಳನ್ನು ಗಳಿಸಿಕೊಂಡಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಮೈತ್ರಿ ಬೆಂಬಲದೊಂದಿಗೆ ಸ್ಪರ್ಧೆಗಿಳಿಯುತ್ತದೆಯೋ ಅಥವಾ ಬೆಂಬಲ ನೀಡಲಿದೆಯೋ ಕಾದು ನೋಡಬೇಕು.
ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಸಂಸದರು ಚರ್ಚೆ ನಡೆಸಿದ್ದಾರೆ. ಪರಮೇಶ್ವರ್ ಅವರಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಸಂಸದರಿಗೆ ನೀಡಬೇಕು, ಲೋಕಸಭೆ ಚುನಾವಣೆ ಇರುವುದರಿಂದ ಲೋಕಸಭೆ ಸದಸ್ಯರೊಬ್ಬರಿಗೆ ಈ ಹುದ್ದೆ ನೀಡಿದರೆ ಲೋಕಸಭೆ ಚುನಾವಣೆಗೆ ಅನುಕೂಲವಾಗುತ್ತದೆ ಎಂಬ ಬಗ್ಗೆಯೂ ಕೂಡ ಚರ್ಚೆಯಾಗಿದೆ.
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಶಾಸಕರ ನಡುವೆ ಉಂಟಾದ ಭಿನ್ನಾಭಿಪ್ರಾಯ ಇನ್ನೂ ಶಮನಗೊಂಡಿಲ್ಲ. ಬೂದಿ ಮುಚ್ಚಿದ ಕೆಂಡದಂತಿದೆ. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷಗಾದಿ ಪಡೆಯಲು ಸಂಸದರು ಪೈಪೆÇೀಟಿ ಶುರುವಿಟ್ಟುಕೊಂಡಿದ್ದಾರೆ, ಮುಂದೇನಾಗಲಿದೆಯೋ ಕಾದುನೋಡಬೇಕು.