ನವದೆಹಲಿ:ಜೂ-೨೧: ಆರೋಗ್ಯಕರ ಜೀವನಕ್ಕೆ ಯೋಗಾಭ್ಯಾಸ ಸಹಕಾರಿಯಾಗಿದೆ. ಇದರ ಸಂಪೂರ್ಣ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಕರೆ ನೀಡಿದೆ.
ಮನುಷ್ಯನ ಪ್ರಾಣಕ್ಕೆ ಎರವಾಗುವ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಸಂಭಾವ್ಯ ಅಪಾಯ ತಗ್ಗಿಸಲು ಯೋಗಾಭ್ಯಾಸ ನೆರವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ವಿಭಾಗದ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ತಿಳಿಸಿದ್ದಾರೆ
ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತ ಹಾಗೂ ಮಧುಮೇಹದಿಂದ ಆಗ್ನೇಯ ಏಷ್ಯಾದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಿದ್ದಾರೆ. ಪ್ರಾಣಕ್ಕೆ ಎರವಾಗುವ ಇಂಥ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಯೋಗಾಭ್ಯಾಸದಲ್ಲಿ ಪರಿಹಾರವಿದೆ ಎಂದು ಹೇಳಿದರು.
ನಿರಂತರ ಯೋಗಾಭ್ಯಾಸವು ಖಿನ್ನತೆಯನ್ನು ತಡೆಗಟ್ಟುತ್ತದೆ. ಅಲ್ಲದೆ, ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಮಾಂಸಖಂಡ, ಹೃದಯನಾಳ, ಮೂಳೆಗಳು ಸದೃಢವಾಗುತ್ತವೆ. ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ ಎಂದರು.
ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಸಂಭವಿಸುತ್ತಿರುವ ಅಕಾಲಿಕ ಮರಣದ ಪ್ರಮಾಣವನ್ನು 2025ರ ಹೊತ್ತಿಗೆ ಕಾಲು ಭಾಗದಷ್ಟು ಕಡಿಮೆಗೊಳಿಸಲು ಪ್ರಾದೇಶಿಕ ವಿಭಾಗದ ಸದಸ್ಯ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಅಲ್ಲದೆ, ಈ ಪ್ರಮಾಣವನ್ನು 2030ರ ಹೊತ್ತಿಗೆ ಮೂರನೇ ಒಂದರಷ್ಟು ಕಡಿಮೆ ಮಾಡುವ ಗುರಿ ಹೊಂದಿವೆ.
International Yoga Day,WHO,Yoga Helps Against Non-Communicable Diseases