ನವದೆಹಲಿ:ಜೂ-21: 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು, ಇಂದು ಬೆಳಗ್ಗಿನಿಂದಲೆ ವಿಶ್ವದ ವಿವಿಧೆಡೆ ಗಣ್ಯಾತೀಗಣ್ಯರು , ಜನಪ್ರತಿನಿಧಿಗಳು , ವಿದ್ಯಾರ್ಥಿಗಳು ಯೋಗಾಸನಗಳನ್ನು ಮಾಡಿ ಗಮನ ಸೆಳೆದಿದ್ದಾರೆ.
ವಿಶೇಷ ವೆಂದರೆ ಭಾರತೀಯ ಐಟಿಬಿಪಿ ಯೋಧರು 18,000 ಮೀಟರ್ ಎತ್ತರದ ಲಡಾಕ್ನ ಹಿಮಗುಡ್ಡೆಗಳ ಮೇಲೆ ಸೂರ್ಯನಮಸ್ಕಾರಗಳನ್ನು ಮಾಡಿ ಗಮನಸೆಳೆದಿದ್ದಾರೆ. ಈ ಚಿತ್ರಗಳನ್ನು ಆಯುಷ್ ಸಚಿವಾಲಯ ಪೋಸ್ಟ್ ಮಾಡಿದೆ.
ಭಾರಾತೀಯ ವಾಯುಪಡೆಯ ಇಬ್ಬರು ವೀರ ಯೋಧರು 15,000ಅಡಿ ಎತ್ತರದ ಆಕಾಶದಲ್ಲಿ ರೋಮಾಂಚನಕಾರಿ ಯೋಗಾಸನ ಮಾಡಿದ್ದಾರೆ. ಪ್ಯಾರಾಟ್ರೂಪರ್ಸ್ ತರಬೇತಿ ಕೇಂದ್ರದ ತರಬೇತುದಾರರಾದ ಕೆಬಿಉಸ್ ಸಾಮ್ಯಾಲ್ ಮತ್ತು ಗಜಾನಂದ್ ಯಾದವ್ ಅವರು ಗಾಳಿಯಲ್ಲಿ ವಾಯು ನಮಸ್ಕಾರ ಮತ್ತು ವಾಯು ಪದ್ಮಾಸನ ಮಾಡಿದರು.
ಅರುಣಾಚಲದ ಲೋಹಿತ್ಪುರ್ನಲ್ಲಿ ಐಟಿಪಿಬಿ ಯೋಧರ ತಂಡ ದಿಗಾರು ನದಿಯಲ್ಲಿ ಯೋಗಾಸನಗಳನ್ನು ಮಾಡಿದ್ದಾರೆ.
ವಿಶಾಖಪಟ್ಟಣಂನಲ್ಲಿ ನೌಕಾಪಡೆಯ ಯೋಧರು ಐಎನ್ಎಸ್ ಜ್ಯೋತಿ ನೌಕೆಯಲ್ಲಿ ವಿಶೇಷ ಆಸನಗಳನ್ನು ಮಾಡಿದ್ದಾರೆ.
ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಡೆಹರಾಡೂನ್ನ ಅರಣ್ಯ ಸಂಶೋಧನಾ ಕೇಂದ್ರದ ಆವರಣದಲ್ಲಿ 50,000 ಕ್ಕೂ ಹೆಚ್ಚು ಜನರೊಂದಿಗೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಸನಗಳನ್ನು ಮಾಡಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಜಗತ್ತಿನ ಅತಿ ದೊಡ್ಡ ಸಾಮೂಹಿಕ ಚಳವಳಿಯಾಗಿ ಬೆಳೆದಿರುವ ಯೋಗಕ್ಕೆ ಇಡೀ ಜಗತ್ತನೇ ಒಂದು ಗೂಡಿಸುವ ಶಕ್ತಿಯಿದೆ. ಟೋಕಿಯೋದಿಂದ ಟೊರಾಂಟೊ, ಶಾಂಘೈನಿಂದ ಚಿಕಾಗೊ, ಸ್ಟಾಕ್ಹೋಮ್ನಿಂದ ಸಾವೊಪೌಲೊ ಸೇರಿ ವಿಶ್ವದ ಎಲ್ಲೆಡೆಯೂ ಯೋಗ ಆಚರಿಸಲಾಗುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಹಿಂದಿನ, ಈಗಿನ ಹಾಗೂ ಮುಂದಿನ ಭರವಸೆಯೇ ಯೋಗ. ಪ್ರತಿ ವರ್ಷ ಜಗತ್ತಿನಲ್ಲಿ 180 ಲಕ್ಷ ಜನರು ಹೃದಯ ಸಂಬಂಧಿ ಕಾಯಿಲೆಗೆ ಹಾಗೂ 16 ಲಕ್ಷ ಮಂದಿ ಡಯಾಬಿಟಿಸ್ಗೆ ಒಳಗಾಗುತ್ತಿದ್ದಾರೆ. ಯೋಗ ಅಭ್ಯಾಸ ಮಾಡುವುದರಿಂದ ರೋಗದಿಂದ ಮುಕ್ತಿ ಪಡೆಯಬಹುದು, ಆರೋಗ್ಯ ಸುಧಾರಣೆಯಿಂದ ವೈದ್ಯಕೀಯ ಖರ್ಚು ಕೂಡ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು. ಯೋಗದಿಂದ ಮನುಷ್ಯನ ದೇಹ, ಮೆದುಳು ಮತ್ತು ಆತ್ಮವನ್ನು ಒಟ್ಟಿಗೆ ಬಂಧಿಸಲಿದ್ದು, ಇದರಿಂದ ಮನದಲ್ಲಿ ಶಾಂತಿಯ ಭಾವನೆ ಮೂಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಇನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ರಾಜಸ್ಥಾನದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರ ಮಾರ್ಗದರ್ಶನದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಸನಗಳನ್ನು ಪ್ರದರ್ಶಿಸಿದ್ದು,ಗಿನ್ನಿಸ್ ರೆಕಾರ್ಡ್ ಪುಟಕ್ಕೆ ಸೇರ್ಪಡೆಯಾಗಿದೆ.
ವಿವಿಧ ಸಂಘ ಸಂಸ್ಥೆಗಳು, ಮಠ, ಮಂದಿರಗಳು , ಶಾಲಾ ಕಾಲೇಜುಗಳು ಸಾಮೂಹಿಕ ಯೋಗಾಸನಗಳನ್ನು ಮಾಡಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿವೆ.
International Yoga Day 2018,Indo-Tibetan Border police perform Surya Namaskar,dehradun,PM Modi