ರೈತರ ಆದಾಯ ಹೆಚ್ಚಳಕ್ಕೆ ರಾಜ್ಯದಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಕೆ

 

ಬೆಂಗಳೂರು, ಜೂ.21- ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಇಸ್ರೇಲ್ ತಂತ್ರಜ್ಞಾನವನ್ನು ರಾಜ್ಯದಲ್ಲಿ ಬಳಕೆ ಮಾಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
ಮಲ್ಯ ವಿಸಿ ಫಾರಂನ 900 ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ದತಿಯನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ 25ಸಾವಿರ ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿಗೆ ಇಸ್ರೇಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ಮುಂದಿನ ಮೂರು ತಿಂಗಳಲ್ಲಿ ಇಸ್ರೇಲ್ ತಂತ್ರಜ್ಞಾನದ ಕೃಷಿ ಮತ್ತು ತೋಟಗಾರಿಕೆ ಪದ್ದತಿಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಈಗಾಗಲೇ ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಇಸ್ರೇಲ್ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದು, ಮುಂದಿನ ಐದು ವರ್ಷದಲ್ಲಿ ಭಾರೀ ಬದಲಾವಣೆ ನಿರೀಕ್ಷಿಸಲಾಗುತ್ತಿದೆ.

ಇಸ್ರೇಲ್ ತಂತ್ರಜ್ಞಾನವನ್ನು ಬಳಸಿಕೊಂಡು ಹೈಟೆಕ್ ಮಾದರಿಯಲ್ಲಿ ಮಿತವಾಗಿ ನೀರನ್ನು ಬಳಸಿ ಅಧಿಕ ಇಳುವರಿ ಪಡೆಯಲು ಉದ್ದೇಶಿಸಲಾಗಿದೆ.
ರೈತರು ಬೇಸಾಯ ಮಾಡಿ ಕೇವಲ ಬೆಳೆ ಬೆಳೆಯುವುದಷ್ಟೇ ಅಲ್ಲ, ತಾವು ಬೆಳೆದ ಬೆಳೆಯ ಉತ್ಪನ್ನಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ಗ್ರಾಹಕರಿಗೆ ಮಾರಾಟ ಮಾಡಲು ಸೂಕ್ತ ಪ್ಯಾಕಿಂಗ್ ಮಾಡುವವರೆಗಿನ ತಂತ್ರಜ್ಞಾನವನ್ನು ಬಳಸಲು ಉದ್ದೇಶಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನ ಯಶಸ್ವಿಯಾದರೆ, ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ಇಸ್ರೇಲ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಲ್ಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆ ಪದ್ದತಿಗಳ ಬಗ್ಗೆ ಅಧ್ಯಯನ ಮಾಡಿದ್ದರು. ಅದನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ತರುವ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ ಈಗ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ.

ಇದಲ್ಲದೆ ಈಗಾಗಲೇ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಇಂಡೋ ಇಸ್ರೇಲ್ ಸಹಭಾಗಿತ್ವದಲ್ಲಿ ಹಣ್ಣು, ತರಕಾರಿ ಬೆಳೆಗಳ ಉತ್ಕøಷ್ಟ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಕೋಲಾರ ಭಾಗದಲ್ಲಿ ಮಾವು ಉತ್ಕøಷ್ಟ ಕೇಂದ್ರ, ಬಿಜಾಪುರ, ಬಾಗಲಕೋಟೆ ಭಾಗದಲ್ಲಿ ದಾಳಿಂಬೆ ಉತ್ಕøಷ್ಟ ಕೇಂದ್ರ ಸ್ಥಾಪಿಸುವ ಸಾಧ್ಯತೆ ಇದೆ. ಉತ್ತಮ ಗುಣಮಟ್ಟದ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲು ರೈತರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರೈತರಿಗೆ ಹೈಟೆಕ್ ಮಾದರಿಯ ಹಸಿರು ಮನೆ, ನೆರಳು ಪರದೆ ಮನೆ, ಹನಿ ನೀರಾವರಿ, ರಾಸವರಿ ಸಿಸ್ಟಮ್ ಅಳವಡಿಕೆ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಉತ್ತಮ ಗುಣಮಟ್ಟದ ಸಸಿಗಳನ್ನು ರೈತರಿಗೆ ಒದಗಿಸಲು ಹೈಟೆಕ್ ನರ್ಸರಿಗಳನ್ನು ತೆರೆಯಲಾಗುತ್ತದೆ.
ಇಸ್ರೇಲ್ ತಂತ್ರಜ್ಞಾನ ಮಾದರಿಯಲ್ಲಿ ನೀರು ಮತ್ತು ಪೆÇೀಷಕಾಂಶಗಳನ್ನು ಒದಗಿಸುವ ಪ್ರಾತ್ಯಕ್ಷಿಕೆಗಳನ್ನು ಕೂಡ ನೀಡಲಾಗುವುದು ಎಂದು ಮೂಲಗಳು ಹೇಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ