ಪಠ್ಯದಲ್ಲಿ ಯೋಗವನ್ನು ಸೇರಿಸಿದರೆ ಆರೋಗ್ಯಕರ ರಾಷ್ಟ್ರ ನಿರ್ಮಾಣ ಸಾಧ್ಯ – ಎಂ.ವೆಂಕಯ್ಯ ನಾಯ್ಡು

ಮುಂಬೈ, ಜೂ.21-ಆರೋಗ್ಯಪೂರ್ಣ ರಾಷ್ಟ್ರ ನಿರ್ಮಾಣಕ್ಕಾಗಿ ಶಾಲೆಯಲ್ಲಿ ಯೋಗವನ್ನು ಪಠ್ಯವನ್ನಾಗಿ ಸೇರಿಸುವ ಅಗತ್ಯವನ್ನು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ ನಡೆದ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನ ಯೋಗ ಪದ್ದತಿಯು ಭಾರತದಿಂದ ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದು ಬಣ್ಣಿಸಿದರು. ಸಕರಾತ್ಮಕ ಚಿಂತನೆಗಳಿಗಾಗಿ ಯೋಗಾಭ್ಯಾಸ ಬಹು ಮುಖ್ಯ. ಇದನ್ನು ಶಾಲೆಯ ಪಠ್ಯದಲ್ಲಿ ಸೇರಿಸಿದರೆ ಆರೋಗ್ಯಕರ ರಾಷ್ಟ್ರ ನಿರ್ಮಾಣ ಸಾಧ್ಯ. ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಉಂಟಾಗುತ್ತಿರುವ ಒತ್ತಡದಿಂದ ಮುಕ್ತಿ ಪಡೆಯಲು ಯೋಗ ತುಂಬಾ ಸಹಕಾರಿ ಎಂದು ನಾಯ್ಡು ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಸನ ಮಾಡಿದರು. ಮುಂಬೈನಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್, ಕೇಂದ್ರ ಸಚಿವ ಬಾಬುಲ್ ಸುಪ್ರೀಯೋ, ಸಂಸದೆ ಪೂನಂ ಮಹಾಜನ್ ಮೊದಲಾದವರು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ