ಪಕ್ಷದ ಮುಖಂಡರು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು – ಸಂಸದ ಡಿ.ಕೆ.ಸುರೇಶ್

ಕುಣಿಗಲ್,ಜೂ.20- ಪಕ್ಷದ ಮುಖಂಡರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ತಾಲ್ಲೂಕಿನ ಗಿರಿಗೌಡನಪಾಳ್ಯದ ಗೇಟ್ ಬಳಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 20 ಸಾವಿರಕ್ಕೂ ಅಧಿಕ ಅಂತರದಲ್ಲಿ ಗೆಲ್ಲಬೇಕಿತ್ತು. ಆದರೆ ಅಂತರ ಕಡಿಮೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಲು ಇಂದಿನಿಂದಲೇ ಕಾರ್ಯಕರ್ತರು ಸಂಘಟಿತರಾಗಬೇಕು. ಏಕೆಂದರೆ ಜೆಡಿಎಸ್-ಬಿಜೆಪಿ ಪ್ರಬಲವಾಗಿದೆ.
ಆದ್ದರಿಂದ ಮುಖಂಡರು ತಮ್ಮ ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಬೇಕು ಎಂದು ಹೇಳಿದರು.
ಸರ್ಕಾರಿ ಅಧಿಕಾರಿಗಳು ಅವರ ಸೇವಾವಧಿ 25ರಿಂದ 30 ವರ್ಷಗಳಿದ್ದು ನಮ್ಮ ಅಧಿಕಾರದ ಅವಧಿ ಕೇವಲ ಐದು ವರ್ಷಗಳು ಮಾತ್ರ. ಆದ್ದರಿಂದ ವಿನಾಕಾರಣ ಮುಖಂಡರುಗಳು ಕಚೇರಿಗಳಿಗೆ ಹೋಗಿ ದರ್ಪ ತೋರಿಸಬೇಡಿ. ನಮಗೆ ಅಭಿವೃದ್ಧಿ ಮಾಡಲು ಸರ್ಕಾರಿ ಅಧಿಕಾರಿಗಳ ಸಹಕಾರ ಪ್ರಮುಖವಾಗಿದೆ ಎಂದರು. ನೂತನ ಶಾಸಕರಿಗೆ ರಾಜಕೀಯ ಗೊತ್ತಿಲ್ಲ. ಅವರಿಗೆ ದಯವಿಟ್ಟು ರಾಜಕೀಯ ಕಲಿಸಬೇಡಿ. ಅವರು ಶಾಸಕರಾಗಿ ಪಕ್ಷಾತೀತವಾಗಿ ಕೆಲಸ ಮಾಡಲು ಬಿಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ರಂಗನಾಥ್, ಜಿಪಂ ಸದಸ್ಯೆ ಅನುಸೂಯಮ್ಮ , ತಾಲ್ಲೂಕು ಪಂಚಾಯ್ತಿ ಸದಸ್ಯ ಅಲ್ಲಾ ಬಕಾಶ್, ಕೆಂಪೇಗೌಡ, ಪುರಸಭೆ ಅಧ್ಯಕ್ಷೆ ನಳಿನಾ ಬೈರಪ್ಪ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ