ಬೆಂಗಳೂರು, ಜೂ.20- ಕನ್ನಡ ಮತ್ತು ಸಂಸ್ಕøತಿ ಇಲಾಖೆ ವ್ಯಾಪ್ತಿಗೆ ಬರುವ ಸಂಸ್ಥೆಗಳಿಗೆ ಯಾವುದೇ ಲಾಬಿಗೆ ಮಣಿಯದೆ ನಿರ್ದಾಕ್ಷಿಣ್ಯವಾಗಿ ನಾಮನಿರ್ದೇಶನ ಮಾಡಬೇಕೆಂದು ಸಚಿವೆ ಜಯಮಾಲ ಅವರಿಗೆ ವೈದ್ಯಕೀಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಸಂಬಂಧ ಇಂದು ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಾಮಾಣಿಕ ಕಲಾವಿದರು ಸಾಹಿತಿಗಳಿಗೆ ಅವಕಾಶ ನೀಡಬೇಕೆ ಹೊರತು ಪ್ರಭಾವಿಗಳ ಹೆಸರೇಳೆಕೊಂಡು ಬರುವವರಿಗೆ ಮಣೆ ಹಾಕಬಾರದು ಎಂದು ಹೇಳಿದರು.
ಕಷ್ಟಪಟ್ಟು ಶ್ರಮಿಸುವವರಿಗೆ, ರಸ್ತೆಯಲ್ಲಿ ಹೋರಾಟ ಮಾಡುವವರಿಗೆ ಅವಕಾಶ ನೀಡಿ ಹಿಂಬಾಗಿಲಿನಿಂದ ಬರುವವರಿಗೆ, ಜಾತಿ, ಸಂಬಂಧ ಹೇಳಿಕೊಂಡು ಬರುವವರಿಗೆ ನಾಮನಿರ್ದೇಶನ ಮಾಡಬಾರದು. ನಿಜವಾದ ಕಲಾವಿದರು ಸಾಹಿತಿಗಳನ್ನು ಗುರುತಿಸಿ ಅಂಥವರಿಗೆ ನಾಮನಿರ್ದೇಶನ ಮಾಡಿ. ಇದರಲ್ಲಿ ಯಾವುದೇ ಒತ್ತಡಕ್ಕೆ ಮಣಿಯಬೇಡಿ ಎಂದು ಜಯಮಾಲ ಅವರಿಗೆ ಸಲಹೆ ನೀಡಿದರು.
ಕೆಂಪೇಗೌಡರ ಸಾಕ್ಷ್ಯಚಿತ್ರ:
ಇದೇ ವೇಳೆ ಸಚಿವೆ ಜಯಮಾಲ ಮಾತನಾಡಿ, ನಾಡಪ್ರಭು ಕೆಂಪೇಗೌಡರು ರಾಜ್ಯದ ಆಸ್ತಿ. ಅವರ ಕುರಿತು ಸಾಕ್ಷ್ಯಚಿತ್ರ ನಿರ್ಮಾಣ ಆಗಬೇಕು ಎಂದು ಹೇಳಿದರು.
ಕೆಂಪೇಗೌಡರ ಜಯಂತಿಯನ್ನು ಒಂದೇ ದಿನ ಆಚರಿಸಿದರೂ ವಿಶೇಷ ಅರ್ಥಪೂರ್ಣ, ವೈಭವದಿಂದ ಆಚರಿಸಬೇಕು. ಮುಂದಿನ ವರ್ಷ ಕೆಂಪೇಗೌಡರ ಜಯಂತಿಗೆ ಸಾಕಷ್ಟು ಮುಂಚಿತವಾಗಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳೋಣ ಎಂದು ತಿಳಿಸಿದರು.
ಕೆಂಪೇಗೌಡರ ಜಯಂತಿಯ ಬಗ್ಗೆಎಲ್ಲರಿಗೂ ತಿಳಿಯುವಂತಾಗಬೇಕು ಎಂದು ಜಯಮಾಲ ಸಲಹೆ ಮಾಡಿದರು.