ಹವಾಲಾ ಟ್ರಬಲ್- ದೋಸ್ತಿ ಸರ್ಕಾರದಲ್ಲಿ ಕಂಪನ

 

ಬೆಂಗಳೂರು, ಜೂ.20-ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆ(ಐಟಿ) ಹೊಸದಾಗಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿರುವುದು ದೋಸ್ತಿ ಸರ್ಕಾರದಲ್ಲಿ ಕಂಪನ ಸೃಷ್ಟಿಸಿದೆ.

ಡಿ.ಕೆ.ಶಿವಕುಮಾರ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ಬದಿಗೊತ್ತಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಪೂರ್ವ ನಿಗದಿಯಾಗಿತ್ತು. ಈ ಸಭೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಾಧಿಕಾರದ ಉಪಾಧ್ಯಕ್ಷರು ಆಗಿರುವ ಸಚಿವ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕಿತ್ತು.

ಆದರೆ ಮಾಧ್ಯಮಗಳಲ್ಲಿ ಬೆಳಗ್ಗೆಯಿಂದಲೇ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ಐಟಿ ಅಧಿಕಾರಿಗಳು ಸಿದ್ಧತೆ ನಡೆಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕುಮಾರಸ್ವಾಮಿ ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ಬದಿಗೊತ್ತಿ ಪದ್ಮನಾಭನಗರದತ್ತ ದೌಡಾಯಿಸಿದರು.

ಜೆಪಿನಗರದ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ಹೊರಟಿದ್ದ ಕುಮಾರಸ್ವಾಮಿ ಅವರು ಮಾರ್ಗ ಬದಲಾಯಿಸಿ ದೇವೆಗೌಡರ ನಿವಾಸಕ್ಕೆ ತೆರಳಿ ಸುಮಾರು ಹೊತ್ತು ಮಾತುಕತೆ ನಡೆಸಿದರು.
ಒಂದು ವೇಳೆ ತೆರಿಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿರುವುದು, ಹವಾಲಾ ದಂಧೆಯನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡರೆ ಮುಂದೆ ಆಗಬಹುದಾದ ಪರಿಣಾಮಗಳ ಬಗ್ಗೆ ಅವರು ಸಲಹೆ ಪಡೆದಿದ್ದಾರೆ.

ಹವಾಲಾ ದಂಧೆಯಲ್ಲಿ ಶಿವಕುಮಾರ್ ತೊಡಗಿಸಿಕೊಂಡಿದ್ದರೆ ನೇರವಾಗಿ ಇಡಿ ಇಲ್ಲವೇ ಸಿಬಿಐ ಮಧ್ಯಪ್ರವೇಶ ಮಾಡುತ್ತದೆ. ಹೆಚ್ಚಿನ ಮಾಹಿತಿಗೆ ಒಳಪಡಿಸಬೇಕೆಂದು ಅನಿಸಿದರೆ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಒಂದು ವೇಳೆ ಇಡಿ ವಶಕ್ಕೆ ತೆಗೆದುಕೊಂಡರೆ ನಾಳೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ತಂತ್ರಗಳ ಬಗ್ಗೆ ದೇವೇಗೌಡರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಜುಲೈ ತಿಂಗಳ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಅಷ್ಟರೊಳಗೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಶಿವಕುಮಾರ್ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ರಾಜಕೀಯ ಲಾಭ ಪಡೆಯಬಹುದೆಂಬ ಆತಂಕವು ಕುಮಾರಸ್ವಾಮಿ ಅವರಿಗೆ ಕಾಡುತ್ತಿದೆ.
ಇಂತಹ ಪ್ರಕರಣಗಳನ್ನು ತಮ್ಮ ಜೀವನದುದ್ದಕ್ಕೂ ಸಾಕಷ್ಟು ಎದುರಿಸಿರುವ ರಾಜಕೀಯ ಚಾಣಾಕ್ಷ ದೇವೇಗೌಡರ ಜೊತೆ ಕುಮಾರಸ್ವಾಮಿ ರಹಸ್ಯ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ