
ಬೆಂಗಳೂರು, ಜೂ.19-ರಾಜಕೀಯ ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ವಂಶಾಡಳಿತ ಪ್ರಾಬಲ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಇಂಥ ಧೋರಣೆಗಳು ಜನ ಸಾಮಾನ್ಯರ ಅವಕಾಶಗಳ ಬಾಗಿಲನ್ನು ಬಂದ್ ಮಾಡುತ್ತಿವೆ ಎಂದು ವಿಷಾದಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಎಫ್‍ಕೆಸಿಸಿಐ) ನಗರದಲ್ಲಿ ನಿನ್ನೆ ಏರ್ಪಡಿಸಿದ್ದ ಭಾರತದ ಭವಿಷ್ಯದ ಮಾರ್ಗ : ಅವಕಾಶಗಳು ಮತ್ತು ಸವಾಲುಗಳು ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜಕೀಯ ರಂಗವು ವಂಶಪಾರಂಪರ್ಯ ರಾಜಕಾರಣವಾಗುತ್ತಿದೆ. ಪ್ರತಿ ರಾಜ್ಯ, ಜಿಲ್ಲೆ ಮತ್ತು ದೇಶದಲ್ಲಿ ಕೆಲವು ಕುಟುಂಬಗಳು ವಂಶಾಡಳಿತ ಪ್ರಾಬಲ್ಯ ಸಾಧಿಸುತ್ತಿವೆ. ಇದು ದುರದೃಷ್ಟಕರವಾದರೂ, ನೈಜ ಸಂಗತಿ. ವಾಸ್ತವ ಸನ್ನಿವೇಶ ಹೀಗಿರುವಾಗ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಜನರಿಗೆ ನಾವು ಬಾಗಿಲನ್ನು ತೆರೆಯಲು ಹೇಗೆ ಸಾಧ್ಯ ಎಂದು ವರುಣ್ ಪ್ರಶ್ನಿಸಿದರು.
ಇಂದು ಚಿತ್ರೋದ್ಯಮ, ಕ್ರೀಡಾ ಕ್ಷೇತ್ರ, ರಾಜಕೀಯ ಮತ್ತು ಕೈಗಾರಿಕೆ ಹೀಗೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಇಂದು ಸಾಮಾನ್ಯರಿಗೆ ಅವಕಾಶಗಳ ಬಾಗಿಲು ಬಂದ್ ಆಗಿರುವುದನ್ನು ನಾವು ಕಾಣಬಹುದು ಎಂದು ಬೇಸರದಿಂದ ನುಡಿದರು.
ನೀವು ಪ್ರತಿಭಾವಂತ ಯುವಕರಾಗಿದ್ದು, ಪುಟ್ಟ ಪಟ್ಟಣದಲ್ಲಿ ಬೆಳದವರಾಗಿದ್ದರೆ, ನಿಮ್ಮಲ್ಲಿ ಪ್ರತಿಭೆ ಮತ್ತು ಧ್ಯೆರ್ಯ, ಸಾಮಥ್ರ್ಯವೂ ಇದ್ದರೆ, ಇಂಥ ಪರಿಸ್ಥಿತಿಯಲ್ಲಿ ನೀವೇನು ಮಾಡುತ್ತೀರಿ ? ಇದರಿಂದ ಕೆಲವೊಮ್ಮೆ ನಿಮ್ಮ ಪ್ರತಿಭೆ-ಪರಿಶ್ರಮ ವ್ಯರ್ಥವಾಗುತ್ತದೆ. ಇದು ನನಗೆ ತುಂಬಾ ಬೇಸರ ಉಂಟು ಮಾಡಿದೆ ಎಂದು ಅವರು ವಿಷಾದಿಸಿದರು.