ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಹಾಗೂ ವೀರಶೈವ ಮಠಗಳ ಯತ್ನ: ಎ.ಕೆ.ಸುಬ್ಬಯ್ಯ ವಿವಾದಾತ್ಮಕ ಹೇಳಿಕೆ

 

ಬೆಂಗಳೂರು, ಜೂ.19-ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಹಾಗೂ ವೀರಶೈವ ಮಠಗಳು ಪ್ರಯತ್ನಿಸುತ್ತಿವೆ ಎಂದು ವಿಚಾರವಾದಿ ಎ.ಕೆ.ಸುಬ್ಬಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಫ್ರೀಡಂಪಾರ್ಕ್‍ನಲ್ಲಿ ಮಾನವ ಬಂಧುತ್ವ ವೇದಿಕೆ-ಕರ್ನಾಟಕ ಆಯೋಜಿಸಿದ್ದ ಮೈತ್ರಿ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಲು ಜನಾಗ್ರಹ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ಸಲುವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿ ಜಾತ್ಯತೀತ ಸಿದ್ದಾಂತ ಉಳಿಸಿವೆ. ಆದರೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಕೆಲ ವೀರಶೈವ ಮಠಗಳು ಈಗಲೂ ಪ್ರಯತ್ನಿಸುತ್ತಿವೆ. ಅದಕ್ಕಾಗಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಎ.ಕೆ.ಸುಬ್ಬಯ್ಯ ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲೇನಾದರೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮೂಲೆಗುಂಪಾಗುತ್ತಿತ್ತು. ಅಲ್ಲದೆ ವಿಶೇಷ ತನಿಖಾದಳ(ಎಸ್‍ಐಟಿ)ವನ್ನು ರದ್ದು ಮಾಡುತ್ತಿದ್ದರು. ಸಂಸದೆ ಶೋಭಾ ಕರಂದ್ಲಾಜೆ ಕೋಮುವಾದಿಗಳ ಪರ ಬೆಂಬಲಕ್ಕೆ ನಿಲ್ಲುತ್ತಿದ್ದರು ಎಂದು ದೂರಿದರು.
ಮೈತ್ರಿ ಸರ್ಕಾರ ಉಳಿಯಲಿ:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಐದು ವರ್ಷ ಆಡಳಿತ ನಡೆಸಬೇಕು. ಈ ನಿಟ್ಟಿನಲ್ಲಿ ಎಲ್ಲ ಶಾಸಕರು ಒಗ್ಗಟ್ಟಿನಿಂದ ತಮ್ಮ ಪಕ್ಷದ ಸಿದ್ಧಾಂತಗಳನ್ನು ಪಾಲಿಸಬೇಕು ಮತ್ತು ಅವರ ನಾಯಕರುಗಳ ಸೂಚನೆಗೆ ಬದ್ಧರಾಗಿರಬೇಕು ಎಂದು ಇದೇ ವೇಳೆ ಎ.ಕೆ.ಸುಬ್ಬಯ್ಯ ಸಲಹೆ ನೀಡಿದರು.
ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕಿಂತ ಸಾಮಾಜಿಕ ನ್ಯಾಯದ ನಾಯಕರಾಗಬೇಕೆಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ದಿನೇಶ್ ಅಮಿನ್‍ಮಟ್ಟು ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಿಕೆ ಸಂಚಾಲಕ ಅನಂತ್‍ನಾಯಕ್, ದಲಿತ ಹೋರಾಟಗಾರರಾದ ಮೋಹನ್ ರಾಜ್, ಮಾವಳ್ಳಿ ಶಂಕರ್, ವಾಲ್ಮೀಕಿ ಮಠದ ಅಂಬಾಜಿ, ಜನವಾದಿ ಮಹಿಳಾ ಸಂಘದ ಗೀತಾ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ