ಬೆಂಗಳೂರು, ಜೂ.19-ಕರ್ನಾಟಕ ವಿಧಾನ ಪರಿಷತ್ ಹಾಗೂ ವಿಧಾನಸಭೆಗಳು ಇಂದು ಕೋಮುವಾದಿಗಳ, ಹಣವಂತರ, ವ್ಯಾಪಾರಸ್ಥರ, ರಿಯಲ್ ಎಸ್ಟೇಟ್‍ನವರ ಕಪಿಮುಷ್ಠಿಯಲ್ಲಿ ಸಿಲುಕಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಷಾದ ವ್ಯಕ್ತಪಡಿಸಿದರು.
ಕನ್ನಡ ಸೇನೆ ಅಧ್ಯಕ್ಷ ಕೆ.ಆರ್.ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ನೆಲಮಂಗಲದಲ್ಲಿ ಕಾರ್ಯಕರ್ತರು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡ ಉಳಿವಿಗಾಗಿ ಎಲ್ಲರೂ ಒಟ್ಟಾಗಿ ನಿರಂತರ ಹೋರಾಟ ಮಾಡಬೇಕಾಗಿದೆ. ಇದಕ್ಕಾಗಿ ನಾವುಗಳು ಜೈಲಿಗೆ ಹೋಗಲು ಸಿದ್ಧ ಎಂದರು.
ಕುಮಾರ್ ಅವರು ಅಜಾತ ಶತ್ರು. ಅವರು ನಮ್ಮ ನಾಡಿಗೆ ಒಂದು ಶಕ್ತಿ ಇದ್ದಂತೆ. ಪರಿಶುದ್ಧ ಮನಸ್ಸು, ಪ್ರಾಮಾಣಿಕತೆ, ನಿಷ್ಠೆ ಇವುಗಳ ಹೂರಣವಾಗಿರುವ ಇವರು ತಮ್ಮ ಗುಣಗಳಿಂದಲೇ ರಾಜ್ಯದುದ್ದಗಲಕ್ಕೂ ಸಹಸ್ರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದು ಶ್ಲಾಘಿಸಿದರು.
ಕುಮಾರ್ ಅವರು ಇದೇ ರೀತಿ ಕನ್ನಡ ನಾಡು-ನುಡಿಗಾಗಿ ನಿರಂತರ ಹೋರಾಟ ಮಾಡಿ ನೂರು ವರ್ಷ ಆರೋಗ್ಯವಾಗಿರಿ. ಆದರೆ, ರಾಜಕೀಯ ಪ್ರವೇಶ ಮಾಡಬೇಡಿ ಎಂದು ಸಲಹೆ ನೀಡಿದರು.
ಇತ್ತೀಚೆಗೆ ಕನ್ನಡಕ್ಕೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಉಳಿಸಲು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.