ಬೆಂಗಳೂರು, ಜೂ.19- ನೈರುತ್ಯ ಮುಂಗಾರು ರಾಜ್ಯದಲ್ಲಿ ಚುರುಕಾಗಿದ್ದು, ಜೂನ್ ಕೊನೆ ವಾರದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ.21, 22ರ ನಂತರ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ. ಈ ತಿಂಗಳ ಕೊನೆಯ ವಾರದಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ.
ಮೇ ಹಾಗೂ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಮುಂಗಾರು ಆರಂಭವಾದಾಗಿನಿಂದ ರಾಜ್ಯದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಈ ತಿಂಗಳ ಅಂತ್ಯದವರೆಗೂ ಇದೇ ರೀತಿ ಮಳೆಯಾಗಲಿದೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಹಜವಾಗಿಯೇ ವಾಡಿಕೆ ಮಳೆ ಪ್ರಮಾಣ ಹೆಚ್ಚಾಗಿದ್ದು, ಅಧಿಕ ಪ್ರಮಾಣದ ಮಳೆ ನಿರೀಕ್ಷಿಸಬಹುದಾಗಿದೆ. ಮುಂಗಾರಿನ ಆರಂಭದಲ್ಲೇ ಉತ್ತಮ ಮಳೆಯಾಗಿದ್ದರಿಂದ ಜಲಾಶಯಗಳ ನೀರಿನ ಸಂಗ್ರಹ ಗಣನೀಯವಾಗಿ ಹೆಚ್ಚಳವಾಗಿದೆ. ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಹಲವೆಡೆ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ. ಒಟ್ಟಾರೆ ಈ ಬಾರಿಯ ಮುಂಗಾರು ಹಂಗಾಮು ಆಶಾದಾಯಕವಾಗಿದೆ ಎಂದು ಅವರು ತಿಳಿಸಿದರು.