ಸತೀಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು: ಮಾನವ ಬಂಧುತ್ವ ವೇದಿಕೆ

 

ಬೆಂಗಳೂರು, ಜೂ.19- ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಸಾಮಾಜಿಕ ನ್ಯಾಯವನ್ನು ಪಾಲನೆ ಮಾಡಬೇಕು ಎಂದು ಬೆಂಬಲಿಗರು ಆಗ್ರಹಿಸಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಮೈತ್ರಿ ಸರ್ಕಾರ ಸಾಮಾಜಿಕ ನ್ಯಾಯ ಪಾಲಿಸಬೇಕೆಂದು ಏರ್ಪಡಿಸಲಾಗಿದ್ದ ಜನಾಗ್ರಹ ಸಮಾವೇಶದಲ್ಲಿ ಮಾತನಾಡಿದ ಬಹುತೇಕ ಗಣ್ಯರು, ಸತೀಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿದರು.
ಪಕ್ಷ ಸಂಘಟನೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಉತ್ತಮ ಕೆಲಸ ಮಾಡಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಜಾರಕಿಹೊಳಿ ಅವರು ಕಾರಣರಾಗಿದ್ದರು. ಆರಂಭದಲ್ಲಿ ಸಚಿವರಾಗಿದ್ದ ಅವರನ್ನು ಅನಂತರ ಸಂಪುಟ ವಿಸ್ತರಣೆಯಲ್ಲಿ ಕೈ ಬಿಡಲಾಯಿತು. ಅಂದಿನಿಂದ ಇಂದಿನವರೆಗೂ ಉದ್ದೇಶ ಪೂರ್ವಕವಾಗಿಯೇ ಅವರನ್ನು ಸಂಪುಟದಿಂದ ದೂರವಿಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈಚಾರಿಕ ಹಿನ್ನೆಲೆಯುಳ್ಳ ಸತೀಶ್ ಜಾರಕಿಹೊಳಿ ಅವರು ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಜಾತಿ ಭೇದವಿಲ್ಲದೆ ನಾಯಕತ್ವವನ್ನು ರೂಢಿಸಿಕೊಂಡಿದ್ದಾರೆ. ರಾಜಕೀಯ ದ್ವೇಷಕ್ಕೆ ಅವರನ್ನು ಮೂಲೆಗುಂಪು ಮಾಡುವುದು ಸರಿಯಲ್ಲ ಎಂಬ ಅಸಮಾಧಾನ ಕೇಳಿ ಬಂತು.
ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಮಂದಿ ಬೆಂಬಲಿಗರು ಫ್ರೀಡಂ ಪಾರ್ಕ್‍ನಲ್ಲಿ ನಡೆದ ಜನಾಗ್ರಹ ಸಮಾವೇಶದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ