ಬೆಂಗಳೂರು, ಜೂ.19- ಕೊಳೆತು ನಾರುತ್ತಿರುವ ತ್ಯಾಜ್ಯ… ಇದರಿಂದ ಬೇಸತ್ತ ಸಮಾಜ ಸೇವಕರೊಬ್ಬರು ಹೆಸರುಘಟ್ಟ ರಸ್ತೆಯಲ್ಲಿರುವ ಬಿಬಿಎಂಪಿ ಕಚೇರಿ ಮುಂದೆ ಮನೆಯಲ್ಲಿರುವ ಕಸ ತಂದು ಸುರಿದು ಏಕಾಂಗಿ ಪ್ರತಿಭಟನೆ ಮಾಡಿದ ಪ್ರಸಂಗ ನಡೆಯಿತು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಭುವನೇಶ್ವರಿನಗರ ಬಡಾವಣೆ ನಿವಾಸಿ ಚಂದ್ರಶೇಖರ್ ಎಂಬುವವರು ತಮ್ಮ ಮನೆಯಲ್ಲಿದ್ದ ಕಸವನ್ನು ಬಿಬಿಎಂಪಿ ಕಚೇರಿ ಮುಂದೆ ಸುರಿದು ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದಿಂದಲೂ ಈ ಭಾಗದಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಅಲ್ಲಿಯೇ ಕೊಳೆತು ನಾರುತ್ತಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಅಲ್ಲದೆ, ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿಯಲ್ಲಿ ಸಾರ್ವಜನಿಕರು ಕಾಲ ಕಳೆಯುವಂತಾಗಿದೆ.ಕಳೆದ ಹತ್ತು ವರ್ಷಗಳಿಂದ ನಾನು ಈ ಭಾಗದಲ್ಲಿ ವಾಸ ಮಾಡುತ್ತಿದ್ದೇನೆ. ಅಲ್ಲದೆ ಮೇಲಾಗಿ ನಾನೊಬ್ಬ ಸಮಾಜ ಸೇವಕ. ರಸ್ತೆ ಬದಿಯಲ್ಲಿ ಕಸ ಸುರಿಯುವವರಿಗೆ ತಿಳುವಳಿಕೆ ಕೂಡ ಹೇಳುತ್ತಿದ್ದೇನೆ. ಆದರೆ ಈಗ ರಸ್ತೆಯಲ್ಲೇ ಕಸ ಕೊಳೆತು ನಾರುತ್ತಿದೆ. ಕಸ ಎಲ್ಲಿ ಹಾಕೋಣ ಎಂದು ಸಾರ್ವಜನಿಕರು ನನ್ನನ್ನು ಕೇಳುತ್ತಿದ್ದಾರೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ತ್ಯಾಜ್ಯವಿಲೇವಾರಿ ಮಾಡುವಂತೆ ಸಂಬಂಧಪಟ್ಟವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರೆ ಗಾಡಿ ಸರಿ ಇಲ್ಲ, ನಾಳೆ ಬರುತ್ತೇವೆ, ನಾಡಿದ್ದು ಬರುತ್ತೇವೆ ಎಂದು ಇಲ್ಲದ ಸಬೂಬು ಹೇಳುತ್ತಾರೆ. ಕಸವನ್ನು ಮನೆಯಲ್ಲಿ ಒಂದು ಅಥವಾ ಎರಡು ದಿನ ಇಟ್ಟುಕೊಳ್ಳಬಹುದು. ಆಮೇಲೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮೊದಲೇ ಮಾವಿನ ಹಣ್ಣಿನ ಕಾಲವಾದ್ದರಿಂದ ಸೊಳ್ಳೆಗಳು ಹೆಚ್ಚಾಗುತ್ತವೆ. ಕೊನೆಗೆ ಯಾವುದೇ ದಾರಿಯಿಲ್ಲದೆ ಏಕಾಂಗಿಯಾಗಿ ಪ್ರತಿಭಟನೆಗೆ ಇಳಿದಿದ್ದೇನೆ. ಅಧಿಕಾರಿಗಳ ಕಣ್ಣು ತೆರೆಸುವುದಕ್ಕಾಗಿ ಅಷ್ಟೆ ಈ ಏಕಾಂಗಿ ಪ್ರತಿಭಟನೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.