ಬಿಬಿಎಂಪಿ ನೂತನ ಆಯುಕ್ತ ಮಹೇಶ್ವರ್‍ರಾವ್ ಕಾರ್ಯವೈಖರಿ ಬಗ್ಗೆ ಅಸಮಾಧಾನ: ಮತ್ತೆ ಮಂಜುನಾಥ್ ಪ್ರಸಾದ್ ಆಯುಕ್ತರಾಗಿ ನಿಯೋಜನೆ ಸಾಧ್ಯತೆ

 

ಬೆಂಗಳೂರು, ಜೂ.19- ಬಿಬಿಎಂಪಿ ನೂತನ ಆಯುಕ್ತ ಮಹೇಶ್ವರ್‍ರಾವ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ ಅವರ ವರ್ಗಾವಣೆಗೆ ಕಾಲ ಸನ್ನಿಹಿತವಾಗಿದ್ದು, ಮತ್ತೆ ಮಂಜುನಾಥ್ ಪ್ರಸಾದ್ ಅವರೇ ಆಯುಕ್ತರಾಗಿ ನಿಯೋಜನೆಗೊಳ್ಳುವ ಸಾಧ್ಯತೆಗಳಿವೆ.
ಮಂಜುನಾಥ್ ಪ್ರಸಾದ್ ಅವರನ್ನು ಮತ್ತೆ ಬಿಬಿಎಂಪಿ ಆಯುಕ್ತರನ್ನಾಗಿ ನಿಯೋಜನೆ ಮಾಡುವ ಆದೇಶಕ್ಕೆ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗಳ ಸಹಿ ಬೀಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ಮುಖ್ಯ ಚುನಾವಣಾಧಿಕಾರಿಗಳು ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ವರ್ಗಾವಣೆ ಮಾಡಿ ಮಹೇಶ್ವರ್‍ರಾವ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಿದ್ದರು.
ಚುನಾವಣಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಮಹೇಶ್ವರ್‍ರಾವ್ ಅವರು ಬಿಬಿಎಂಪಿ ಕೇಂದ್ರ ಕಚೇರಿಯತ್ತ ತಲೆ ಕೂಡ ಹಾಕಿರಲಿಲ್ಲ. ಅವರ ಗೈರಿನಲ್ಲೇ ಪಾಲಿಕೆ ಸಭೆ ಕೂಡ ನಡೆದಿತ್ತು.
ಮಹೇಶ್ವರ್‍ರಾವ್ ಅವರು ನಗರದ ಪ್ರಮುಖ ಸಮಸ್ಯೆಗಳ ನಿವಾರಣೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತು ಪಾಲಿಕೆ ಸದಸ್ಯರ ಕೈಗೆ ಸಿಗದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಮಹೇಶ್ವರ್‍ರಾವ್ ಅವರನ್ನು ಕೂಡಲೇ ವರ್ಗ ಮಾಡಿ ದಕ್ಷ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಕ ಮಾಡುವಂತೆಯೂ ಒತ್ತಾಯಿಸಿದ್ದರು.
ಇದರ ಜತೆಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರೂ ಮಹೇಶ್ವರ್‍ರಾವ್ ಅವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಮತ್ತೆ ಮಂಜುನಾಥ್ ಪ್ರಸಾದ್ ಅವರಿಗೆ ಮಣೆ ಹಾಕಲು ಮುಂದಾಗಿದ್ದು, ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ