ಮೈಸೂರು,ಜೂ.19-ನಗರದ ಹೆಸರಾಂತ ಚೆಲುವಾಂಬ ಆಸ್ಪತ್ರೆಯಲ್ಲಿ ಬೆಡ್ಗಳಿಲ್ಲದೆ ಬಾಣಂತಿಯರು ನೆಲದ ಮೇಲೆ ಮಲಗಿರುವ ವಿಷಯ ತಿಳಿದು ಶಾಸಕ ನಾಗೇಂದ್ರ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂಜೆ ಪತ್ರಿಕೆಯಲ್ಲಿ ಈ ಬಗ್ಗೆ ವಿಸ್ತೃತ ವರದಿ ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ಕೆ.ಆರ್.ಆಸ್ಪತ್ರೆಯ ದುಸ್ಥಿತಿಯನ್ನು ಓದಿ ಇಂದು ಬೆಳಗ್ಗೆ ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಶಾಸಕರು ಪರಿಶೀಲಿಸಿದರು.
ಈ ವೇಳೆ ಕೆ.ಆರ್.ಆಸ್ಪತ್ರೆ ಸ್ಟೂಪರಿಡೆಂಟ್ ಚಂದ್ರಶೇಖರ್ ಅವರಿಂದ ಮಾಹಿತಿ ಪಡೆದರು.
ಸುತ್ತಮುತ್ತಲೂ ಸಹ ಸರ್ಕಾರಿ ಆಸ್ಪತ್ರೆಗಳಿದ್ದರೂ ಇಲ್ಲಿಗೆ ಏಕೆ ಗರ್ಭಿಣಿ ಸ್ತ್ರೀಯರು ಬರುತ್ತಿದ್ದಾರೆ. ತಾಲ್ಲೂಕು ವೈದ್ಯರು ಯಾಕೆ ಚೆಲುವಾಂಬ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದಾರೆ. ಅಲ್ಲಿ ಬೆಡ್ಗಳು ಇಲ್ಲವೇ ಎಂದು ಪ್ರಶ್ನಿಸಿದಾಗ, ವೈದ್ಯರು ಯಾವುದೇ ಉತ್ತರ ನೀಡದೆ ಮೌನವಹಿಸಿದರು.
ಚೆಲುವಾಂಬ ಆಸ್ಪತ್ರೆಯಲ್ಲಿ ಹಲವಾರು ಬಾರಿ ಈ ರೀತಿ ಸಮಸ್ಯೆ ಎದುರಾಗಿದ್ದರೂ ಸಹ ಏಕೆ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಮಳೆಗಾಲ ಬೇರೆ . ತಾಯಿಮಗುವಿಗೆ ಶೀತವಾಗುತ್ತದೆ ಇದರಿಂದ ಮಕ್ಕಳಿಗೆ ಸೋಂಕು ಆಗುವ ಸಾಧ್ಯತೆಗಳಿವೆ. ಇದರ ಬಗ್ಗೆ ನಿಮಗೆ ಅರಿವಿಲ್ಲವೇ ಯೆಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಅವರು, ಆಸ್ಪತ್ರೆಯಲ್ಲಿ ಅಶುಚಿತ್ವ ಎದ್ದು ಕಾಣುತ್ತಿದ್ದು, ಇದಕ್ಕೆಲ್ಲ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಹಾಸಿಗೆಗಳ ಕೊರತೆಯಾಗಲು ಕಾರಣವೇನು, ಇಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.