ಕಸದ ಸಮಸ್ಯೆ ಹಿಂದಿರುವ ಮಾಫಿಯಾ ಮಟ್ಟ ಹಾಕಲಾಗುವುದು: ಸಿಎಂ

 

ಬೆಂಗಳೂರು, ಜೂ.19-ಬೆಂಗಳೂರಿನ ಕಸದ ಸಮಸ್ಯೆ ಹಿಂದಿರುವ ಮಾಫಿಯಾವನ್ನು ಮಟ್ಟ ಹಾಕಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಸದ ಸಮಸ್ಯೆ ಹಿಂದೆ ಮಾಫಿಯಾ ಇರುವುದು ಗೊತ್ತಿದೆ. ಕಸದ ಸಮಸ್ಯೆಗೆ ಪರಿಹಾರವಿದ್ದರೂ ಅದಕ್ಕೆ ಅವಕಾಶ ನೀಡುತ್ತಿಲ್ಲ. ಇಂತಹ ಮಾಫಿಯಾವನ್ನು ಮಟ್ಟ ಹಾಕಲಾಗುವುದು ಎಂದರು.

ಬೆಂಗಳೂರಿನಲ್ಲಿ ಕಸದ ಮತ್ತು ರಸ್ತೆಗಳ ಗುಂಡಿ ಸಮಸ್ಯೆಗಳಿದ್ದು ಅವುಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ರೂಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಆಡಳಿತವನ್ನು ಬಿಗಿಗೊಳಿಸಲು ಕಟ್ಟುನಿಟ್ಟಿನ ಕ್ರಮಕೈಗೊಂಡು ಸಾಧ್ಯವಾದಷ್ಟು ಮಟ್ಟಿಗೆ ಆಡಳಿತ ಯಂತ್ರವನ್ನು ಬಿಗಿಗೊಳಿಸಿ ಚುರುಕುಗೊಳಿಸಲಾಗುವುದು ಎಂದು ಹೇಳಿದರು.

ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಾವು ದೆಹಲಿಗೆ ವಿಶೇಷ ವಿಮಾನದಲ್ಲಿ ಹೋಗುತ್ತಿಲ್ಲ. ಆದರೆ ತಮಗೆ ನೀಡಿರುವ ಭದ್ರತೆ ಪ್ರಮಾಣವನ್ನು ಕಡಿಮೆ ಮಾಡಲು ಅಧಿಕಾರಿಗಳು ಒಪ್ಪುತ್ತಿಲ್ಲ ಎಂದು ಹೇಳಿದರು.
ಆಡಳಿತದಲ್ಲಿ ಸಾಕಷ್ಟು ಬದಲಾವಣೆ ತರುವ ಮೂಲಕ ನಾಡಿನ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವ ಉದ್ದೇಶದಿಂದ ಹಲವು ಕನಸುಗಳನ್ನು ಹೊಂದಿರುವುದಾಗಿ ಹೇಳಿದರು.

ಮೈ ಮರೆಯುವ ಸರ್ಕಾರವಲ್ಲ:
ಯಾವುದೇ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮೈ ಮರೆಯುವುದಿಲ್ಲ. ಸಮಯ ವ್ಯರ್ಥ ಮಾಡದೆ ಈಗಾಗಲೇ ಸಂಪುಟದ ಸಚಿವರು ತಮ್ಮ ಆಡಳಿತವನ್ನು ಚುರುಕುಗೊಳಿಸಿದ್ದಾರೆ. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲೇ ಎಲ್ಲಾ ಇಲಾಖೆಗಳು ಚುರುಕಾಗಿ ಕೆಲಸ ಮಾಡಲಿವೆ. ರಾಜ್ಯದಲ್ಲಿ ಅತಿವೃಷ್ಠಿಯಿಂದ ಉಂಟಾದ ಹಾನಿಯ ಬಗ್ಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಖುದ್ದು ಪರಿಶೀಲನೆ ಮಾಡಿದ್ದಾರೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಬೆಂಗಳೂರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ಹೇಳಿದರು.

ಬೆಳಗಾವಿಯ ಖಾನಾಪುರದಲ್ಲಿ ಶಾಲಾ ಮಕ್ಕಳು ಕಾಡಿನಲ್ಲಿ ಶಾಲೆಗೆ 7 ಕಿ.ಮೀ. ನಡೆದು ಹೋಗುವುದನ್ನು ತಪ್ಪಿಸಲು ತುರ್ತಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದರು.
ರಾಜಕೀಯ ಒತ್ತಡವಿಲ್ಲ:
ಭೀಮಾ ತೀರದ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದಂತೆ ಅಧಿಕಾರಿಗಳು ಕೆಲಸ ಮಾಡಬೇಕು, ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಪೆÇಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನಾಡಿನ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಗಮನಸೆಳೆಯಬೇಕು ಎಂದ ಅವರು, ಕಬಿನಿ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಭತ್ತ ನಾಶವಾಗಿ ಸಂಕಷ್ಟಕ್ಕೀಡಾದ ರೈತನನ್ನು ತಮ್ಮ ಕಚೇರಿಗೆ ಕರೆಯಿಸಿ ಪರಿಹಾರ ನೀಡುವ ಭರವಸೆ ನೀಡಿದರು.
ಹಿರಿಯ ನಾಗರಿಕರಿಗೆ ಮಾಸಿಕ 5 ಸಾವಿರ ರೂ., ಗರ್ಭಿಣಿ ತಾಯಿ-ಮಗುವಿಗೆ 6 ಸಾವಿರ ರೂ., 5 ಸಾವಿರ ಕಡಿಮೆ ಆದಾಯವಿರುವ ಹೆಣ್ಣು ಮಕ್ಕಳೀಗೆ ಮಾಸಿಕ 2 ಸಾವಿರ ರೂ. ನೀಡುವುದನ್ನು ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಲಾಗಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಉದ್ದೇಶದಿಂದ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ