
ಬೆಂಗಳೂರು, ಜೂ.19- ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಅವರು ಬಾಯಿ ತುಂಬಾ ನನ್ನನ್ನು ಅಕ್ಕ ಎಂದು ಕರೆದಿದ್ದಾರೆ. ನನಗೂ ಕೂಡ ಅವರ ಮೇಲೆ ಅಪಾರ ಪ್ರೀತಿ ಇದೆ. ಪರಸ್ಪರ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಿದ್ದೇನೆ. ಇನ್ನು ಅವರೊಂದಿಗೆ ಮಾತಿನ ಸಂಘರ್ಷ ಬೆಳೆಸಲು ಇಷ್ಟ ಪಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯಸ್ಸಿನಲ್ಲಿ ನಾನು ಲಕ್ಷ್ಮೀಹೆಬ್ಬಾಳ್ಕರ್‍ಗಿಂತ ದೊಡ್ಡವಳು. ಅವರು ಕಾಂಗ್ರೆಸ್‍ನ ಮಹಿಳಾ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಅವರ ಬಗ್ಗೆ ನನಗೆ ಗೌರವ, ಪ್ರೀತಿ ಎರಡೂ ಇದೆ. ಸಚಿವ ಸ್ಥಾನ ಕೇಳುವುದು ಅವರ ಹಕ್ಕು. ಕಾಂಗ್ರೆಸಿನಲ್ಲಿ ಗೆದ್ದಿರುವ ಎಲ್ಲಾ ಮಹಿಳೆಯರಿಗೂ ಸಚಿವ ಸ್ಥಾನ ಸಿಗಲಿ. ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗಬೇಕು. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ರೂಪಾ ಶಶಿಧರ್ ಸೇರಿದಂತೆ ಎಲ್ಲರಿಗೂ ಅವಕಾಶ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಇನ್ನು ಆರೋಪ- ಪ್ರತ್ಯಾರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಕೆಲಸದ ಮೇಲೆ ನಂಬಿಕೆ ಇದೆ. ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ಬೆಳಗಾವಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನದಲ್ಲಿ ಮಹೇಶ್ ಫೌಂಡೇಶನ್ ಸಂಸ್ಥೆ ಎಚ್‍ಐವಿ ಮಕ್ಕಳಿಗಾಗಿ ಪುನರ್‍ವಸತಿ ಕೇಂದ್ರ ನಡೆಸುತ್ತಿದೆ. ಆದರೆ, ಅಕ್ಕಪಕ್ಕದವರು ಕೇಂದ್ರವನ್ನು ತೆರವುಗೊಳಿಸುವಂತೆ ಒತ್ತಡ ಹೇರಿರುವುದು ಗಮನಕ್ಕೆ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಎಚ್‍ಐವಿ ಸೋಂಕಿತರನ್ನು ಮುಟ್ಟುವುದರಿಂದ ಯಾವುದೇ ಸೋಂಕು ಹರುಡುವುದಿಲ್ಲ. ಮಕ್ಕಳು ತಾವು ಮಾಡದ ತಪ್ಪಿಗೆ ಹುಟ್ಟಿನಿಂದಲೇ ಸೋಂಕನ್ನು ಅನುಭವಿಸುತ್ತಿದ್ದಾರೆ. ಆ ಮಕ್ಕಳ ಬಗ್ಗೆ ಪ್ರೀತಿ ಇರಲಿ. ಇವರಿಗೂ ಸಮಾಜದಲ್ಲಿ ಹೆಚ್ಚು ದಿನ ಬದುಕಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಇಲಾಖೆ ವತಿಯಿಂದ ಸುಮಾರು ಎರಡೂವರೆ ಲಕ್ಷ ಎಚ್‍ಐವಿ ಪೀಡಿತರಿಗೆ ಪುನರ್‍ವಸತಿ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳ ಬಗ್ಗೆ ಪ್ರಸ್ತಾವನೆ ಸಿದ್ದಗೊಂಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ಅವುಗಳನ್ನು ಜಾರಿಗೆ ತರುವುದಾಗಿ ಹೇಳಿದರು.