
ಬೆಂಗಳೂರು,ಜೂ.19-ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದಿಲ್ಲಿ ಭರವಸೆ ನೀಡಿದರು.
ಕೃಷಿ ವಿವಿ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮತಿ ನೀಡಬಾರದು. ದೊಡ್ಡ ಬಳ್ಳಾಪುರದಲ್ಲಿರುವ ರೈಟೆಕ್ ವಿವಿಯನ್ನು ಮುಚ್ಚಿಸಬೇಕು ಹಾಗೂ ಅದರ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೃಷಿ ವಿವಿಯ ವಿದ್ಯಾರ್ಥಿಗಳು ಕಳೆದ ಏಳು ದಿನಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ, ಬಾಗಲಕೋಟೆ ವಿವಿ ವಿದ್ಯಾರ್ಥಿಗಳು ನಗರದ ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಕಾರು ಇದೇ ಮಾರ್ಗದಲ್ಲಿ ಬರುತ್ತಿತ್ತು. ವಿದ್ಯಾರ್ಥಿಗಳ ರ್ಯಾಲಿ ಕಂಡ ತಕ್ಷಣ ಮುಖ್ಯಮಂತ್ರಿಗಳು ಕಾರು ನಿಲ್ಲಿಸಿ ವಿದ್ಯಾರ್ಥಿಗಳ ಬಳಿ ಬಂದು ಸಮಸ್ಯೆಗಳನ್ನು ಆಲಿಸಿದರು.
ಈ ಹಿಂದೆ ಖಾಸಗಿ ವಿವಿಗಳಿಗೆ ಮಾನ್ಯತೆ ನೀಡಬಾರದು ಎಂದು ನಾನೇ ಹೇಳಿದ್ದೆ.ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ ಎಂದು ಕುಮಾರಸ್ವಾಮಿ ಅಭಯ ನೀಡಿದರು.
ಸಂಜೆ ನನ್ನ ಕಚೇರಿಗೆ ಬನ್ನಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುತ್ತೇನೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.