ಮೈತ್ರಿ ಪಕ್ಷಗಳಿಂದ ಲೋಕಸಭೆ ಚುನಾವಣೆ ನಿರ್ಲಕ್ಷಿ: ಕಾರ್ಯಕರ್ತರ ಅಸಮಾಧಾನ

 

ಬೆಂಗಳೂರು, ಜೂ.19- ಕಾಂಗ್ರೆಸ್ ಒಳಜಗಳ ಮತ್ತು ಸರ್ಕಾರದ ಒಳ ಬೇಗುದಿಗಳಲ್ಲೇ ಹೆಚ್ಚು ಸಮಯ ವ್ಯರ್ಥವಾಗುತ್ತಿದ್ದು, ಮೈತ್ರಿ ಪಕ್ಷಗಳು ಲೋಕಸಭೆ ಚುನಾವಣೆಯನ್ನು ನಿರ್ಲಕ್ಷಿಸುತ್ತಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಂದಿನ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಕೇವಲ 10 ತಿಂಗಳು ಮಾತ್ರ ಬಾಕಿ ಇದೆ. ಕಾಂಗ್ರೆಸ್‍ನ ಅಳಿವು-ಉಳಿವು ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಮೈತ್ರಿ ಸರ್ಕಾರ ರಚಿಸಿದ ಬೆನ್ನಲ್ಲೇ ಲೋಕಸಭೆ ಚುನಾವಣೆಗೂ, ಚುನಾವಣಾ ಮೈತ್ರಿ ಮಾಡಿಕೊಳ್ಳುವುದಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಘೋಷಿಸಿವೆ. ಆದರೆ, ಈವರೆಗೂ ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ.

ಬಿಜೆಪಿ ಈಗಿನಿಂದಲೇ ಚುನಾವಣೆ ತಯಾರಿ ಆರಂಭಿಸಿದ್ದು, ಮತದಾರರ ಮನೆ ಬಾಗಿಲಿಗೆ ತಲುಪುವ ಅಭಿಯಾನ ಆರಂಭಿಸಿದೆ. ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದರೂ ಸರ್ಕಾರ ರಚಿಸಲಾಗದೆ ಪೆಟ್ಟು ತಿಂದ ಹುಲಿಯಂತಾಗಿರುವ ಬಿಜೆಪಿ, ಆಕ್ರಮಣಕಾರಿ ಸಂಘಟನೆಗೆ ಮುಂದಾಗಿದೆ. ಸರ್ಕಾರ ರಚಿಸಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಬರಿ ಗೊಂದಲಗಳಲ್ಲೇ ಕಾಲಹರಣ ಮಾಡುತ್ತಿದ್ದು, ಈವರೆಗೂ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಬಂಡಾಯ ಶಮನದಲ್ಲೇ ಸಮಯ ವ್ಯರ್ಥ ಮಾಡುತ್ತಿವೆ.
ಎಲ್ಲವೂ ಸಮಸ್ಥಿತಿಗೆ ಬಂದು ಸಚಿವರು ಕಾರ್ಯಾರಂಭ ಮಾಡಲಾರಂಭಿಸಿದ್ದಾರೆ. ಎರಡನೇ ಹಂತದ ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಎಂಬ ಕುತೂಹಲ ಶಾಸಕರನ್ನು ಕಾಡುತ್ತಿದ್ದು, ಹೇಗಾದರೂ ಮಾಡಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಬೇಕೆಂದು ಹೆಚ್ಚು ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ಇನ್ನು 10 ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆ ಯಾರಿಗೂ ನೆನಪಿದ್ದಂತೆ ಇಲ್ಲ.

ದಂಡ ನಾಯಕನಿಲ್ಲದ ನೌಕೆ:
ಈವರೆಗೂ ಪೂರ್ಣಾವಧಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದ ಅನುಸಾರ ಪರಮೇಶ್ವರ್ ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು. ಅವರು ರಾಜೀನಾಮೆ ನೀಡಲು ಸಿದ್ಧರಿದ್ದರೂ ಹೈಕಮಾಂಡ್ ಹೊಸ ಅಧ್ಯಕ್ಷರನ್ನು ನೇಮಿಸಲು ಹಿಂದೇಟು ಹಾಕುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಎಸ್.ಆರ್.ಪಾಟೀಲ್, ಎಂ.ಬಿ.ಪಾಟೀಲ್, ಟಿ.ಬಿ.ಜಯಚಂದ್ರ, ಸತೀಶ್ ಜಾರಕಿಹೊಳಿ ಹೀಗೆ ಸಾಲು ಸಾಲು ನಾಯಕರು ಆಕಾಂಕ್ಷಿಗಳಾಗಿದ್ದಾರೆ.
ಇಬ್ಬರು ಕಾರ್ಯಾಧ್ಯಕ್ಷರ ಪೈಕಿ ಸಂಪುಟದಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡ ಎಸ್.ಆರ್.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದಿನೇಶ್‍ಗುಂಡೂರಾವ್ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ಪಕ್ಷ ಸಂಘಟನೆಯತ್ತ ಯಾರೂ ಗಮನ ಹರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
28ಕ್ಷೇತ್ರಗಳ ಪೈಕಿ 20ರಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದು ಈ ಮೊದಲು ಹೈಕಮಾಂಡ್ ನಿಗದಿ ಪಡಿಸಿತ್ತು. ಆದರೆ, ಈಗಿನ ವಾತಾವರಣವೇ ಉಲ್ಟಾಸೀದಾ ಆಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ