ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ

ಬೆಂಗಳೂರು: ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರ ಹಿಡಿದಿರುವ ಜೆಡಿಎಸ್‌-ಕಾಂಗ್ರೆಸ್‌ ಸರಕಾರ ಸರಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ.
ಆರನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಇದರಿಂದ ರಾಜ್ಯದ ಆರು ಲಕ್ಷ ನೌಕರರ ಮೂಲ ವೇತನದಲ್ಲಿ ಶೇಕಡ 1.75ರಷ್ಟು ಹೆಚ್ಚಳ ಶಿಫಾರಸಿಗೆ ಆದೇಶಿಸಲಾಗಿದೆ.
ಹಣಕಾಸು ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಅದರಂತೆ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.
ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಮೂಲವೇತನದ ಶೇ.1.75 ತುಟ್ಟಿಭತ್ಯೆ ಮಂಜೂರು ಮಾಡಲಾಗಿದ್ದು, ಈ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲು ಆದೇಶಿಸಲಾಗಿದೆ. 6ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಕಳೆದ ಏ.1ರಿಂದ ಜಾರಿಗೆ ಬರುವಂತೆ ವೇತನ ಮತ್ತು ಭತ್ಯೆ ಪರಿಷ್ಕರಿಸಲಾಗಿದೆ.
ಇದೀಗ, ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿ ಕೇಂದ್ರ ಸರಕಾರ ಶೇ.2 ತುಟ್ಟಿಭತ್ಯೆ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ತನ್ನ ನೌಕರರ ಡಿಎ ಹೆಚ್ಚಳ ಮಾಡಿದೆ. ಸರಕಾರಿ ನೌಕರರು, ಪಂಚಾಯಿತಿಗಳ ಪೂರ್ಣಾವಧಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ನೌಕರರು ಹಾಗೂ ಪಿಂಚಣಿದಾರರಿಗೂ ಈ ಆದೇಶ ಅನ್ವಯವಾಗಲಿದೆ.
ಈ ಹೆಚ್ಚಳವು ಈ ವರ್ಷದ ಜನವರಿ 1ರಿಂದಲೇ ಪೂರ್ವಾನ್ವಯವಾಗಲಿದೆ. ಈ ಸೌಲಭ್ಯ ರಾಜ್ಯ ಸರಕಾರಿ ನೌಕರರು, ಜಿಲ್ಲಾ ಪಂಚಾಯತ್‌ ಪೂರ್ಣಾವಧಿ ನೌಕರರು, ಸರಕಾರಿ ಸಹಾಯ ಧನ ಪಡೆಯುವ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಪೂರ್ಣಾವಧಿ ನೌಕರರಿಗೆ ಅನ್ವಯಿಸಲಿದೆ.
ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 550 ಕೋಟಿ ರೂಪಾಯಿ ಹೊರ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ