ಕರಿಬೇವು ಭಾರತೀಯ ಕುಟುಂಬಗಳಲ್ಲಿ ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ಕರಿಬೇವು ಇರಲೇಬೇಕು. ಆದರೂ ಇದ್ದೂ ಇಲ್ಲದಂತಿರುವುದು ಇದಕ್ಕೆ ಒದಗಿರುವ ಶೋಚನೀಯ ಸ್ಥಿತಿ. ಏಕೆಂದರೆ ನಮ್ಮಲ್ಲಿ ಬಹು ಮಂದಿ ಆಹಾರದಲ್ಲಿನ ಕರಿಬೇವಿನ ಎಲೆಯನ್ನು ಪಕ್ಕಕ್ಕೆ ಸರಿಸುವುದುಂಟು. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಕರಿಬೇವಿನ ಎಲೆಗಳಲ್ಲಿ ವಿಟಾಮಿನ್-ಎ ಹೇರಳವಾಗಿದೆ ಅಲ್ಲದೇ ವಿಟಾಮಿನ್-ಸಿ, ಪ್ರೊಟೀನ್, ಕಾರ್ಬೊಹೈಡ್ರೇಟ್ಸ್ ಸಹ ಅಧಿಕ ಪ್ರಮಾಣದಲ್ಲಿವೆ. ಕಣ್ಣು ಹಾಗೂ ಮೆದುಳಿನ ಆರೋಗ್ಯಕ್ಕೆ ಇದರ ಸೇವನೆ ಸಹಕಾರಿ. ಕರಿ ಬೇವಿನ ಮತ್ತೊಂದು ವೈಶಿಷ್ಟ್ಯವೆಂದರೆ ಎಲೆಗಳನ್ನು ತಾಜಾ ಹಾಗೂ ಒಣಗಿದಾಗಲೂ ಬಳಸಬಹುದು ಮತ್ತು ಒಣಗಿದಾಗಲೂ ಸಹ ಅದು ತನ್ನ ಸುವಾಸನೆಯನ್ನು ಕಳೆದುಕೊಳ್ಳುವುದಿಲ್ಲ.
ಕೊಬ್ಬರಿ ಎಣ್ಣೆಯೊಂದಿಗೆ ಕರಿಬೇವಿನ ಎಲೆಗಳನ್ನು ಕುದಿಸಿ ತಯಾರಿಸಿದ ಎಣ್ಣೆಯು ಕೂದಲ ಬಣ್ಣ ಹಾಗೂ ಬೆಳವಣಿಗೆಗೆ ಸಹಕಾರಿ. ಕರಿಬೇವನ್ನು ನಾಟಿ ವೈದ್ಯಕೀಯ ಪದ್ಧತಿಯಲ್ಲಿ ಜ್ವರ ನಿವಾರಕವಾಗಿ, ಉರಿ ಶಾಮಕವಾಗಿ ಹಾಗೂ ರಕ್ತ ಶದ್ಧಿಕಾರಕವಾಗಿಯೂ ಬಳಸಲಾಗುತ್ತದೆ, ಕರಿಬೇವಿನ ಎಲೆ ಹಾಗೂ ತೊಟ್ಟಿನ ಕಶಾಯವನ್ನು ಕೀಲು ನೋವು, ತೊನ್ನು, ಮೂರ್ಛೆ ರೋಗ, ಮೂಲವ್ಯಾಧಿ, ಆಮಶಂಕೆ, ಜ್ವರ ಹಾಗೂ ಜಂತುಹುಳುಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಎಲೆಯ ಕಶಾಯವನ್ನು ಮುಂಜಾನೆ ಸೇವಿಸುವುದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ವಾಂತಿ ಮೊದಲಾದ ಉದರ ಸಂಬಂಧಿ ವ್ಯಾಧಿಗಳನ್ನು ತಡೆಗಟ್ಟಬಹುದು. ಕ್ಯಾಲ್ಸಿಯಂ ಅಂಶ ಹೇರಳವಾಗಿರುವ ಕಾರಣ ಮಹಿಳೆಯರಿಗೆ ಇದರ ಸೇವನೆ ಅತ್ಯುಪಯುಕ್ತ. ಎಲೆಗಳಿಂದ ತೆಗೆದ ಸುಗಂಧದೆಣ್ಣೆಯು ಘಾಟು ಸುವಾಸನೆಯಿಂದ ಕೂಡಿದ್ದು ಆಹಾರೋತ್ಪನ್ನಗಳು, ಔಷಧಿ, ಸೋಪು ಹಾಗೂ ಹಲವು ಸೌಂದರ್ಯವರ್ಧಕಗಳ ತಯಾರಿಕಾ ಘಟಕಗಳಲ್ಲಿ ಬಳಸಲ್ಪಡುತ್ತದೆ.
ಕರಿಬೇವಿನ ಎಲೆಯಲ್ಲಿರುವ ಪ್ರಮುಖ ಪೋಷಕಾಂಶಗಳು:
ವಿವರ | ಪ್ರತಿ 100 ಗ್ರಾಂ ಹಸಿ ಎಲೆಯಲ್ಲಿ | ಪ್ರತಿ 100 ಗ್ರಾಂ ಒಣ ಎಲೆಯಲ್ಲಿ |
ಪ್ರೊಟೀನ್ | 6.00 ಗ್ರಾಂ | 12.00 ಗ್ರಾಂ |
ಕಾರ್ಬೊಹೈಡ್ರೇಟ್/ ಪಿಷ್ಠ | 1.00 ಗ್ರಾಂ | 5.40 ಗ್ರಾಂ |
ಕೊಬ್ಬು | 18.70 ಗ್ರಾಂ | 64.31 ಗ್ರಾಂ |
ಕ್ಯಾಲ್ಸಿಯಂ | 830 ಮಿ. ಗ್ರಾಂ | 2040 ಮಿ. ಗ್ರಾಂ |
ಕಬ್ಬಿಣ | 0.93 ಮಿ. ಗ್ರಾಂ | 12.00 ಮಿ. ಗ್ರಾಂ |
ಬೀಟಾ ಕ್ಯಾರೊಟೀನ್ | 7560 ಮೈಕ್ರೊ ಗ್ರಾಂ |
5292 ಮೈಕ್ರೊ ಗ್ರಾಂ |