ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್‍ಪಕ್ಷದಲ್ಲೇ ಅಸಮಾಧಾನ

 

ಬೆಂಗಳೂರು, ಜೂ.17-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೂರ್ಣ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಕಾಂಗ್ರೆಸ್‍ಪಕ್ಷದಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಭಿನ್ನಮತ-ಬಂಡಾಯ ಶಮನಗೊಂಡು ಸರ್ಕಾರ ಟೇಕಾಫ್ ಆದ ಸಂದರ್ಭದಲ್ಲೇ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಈ ರೀತಿ ಬಹಿರಂಗ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದಾರೆ ಎಂದು ಸರ್ಕಾರದಲ್ಲಿರುವ ಅನೇಕ ಮುಖಂಡರು ಹಾಗೂ ಪಕ್ಷದ ಹಲವು ಹಿರಿಯ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಯಾವುದೇ ಒಂದು ಸರ್ಕಾರ ಅಧಿಕಾರಕ್ಕೆ ಬಂದಾಗ ತಮ್ಮ ದೂರದೃಷ್ಟಿಯ ಯೋಜನೆಗಳನ್ನು ಜನರ ಮುಂದಿಡಲು ಬಜೆಟ್ ಒಂದು ವೇದಿಕೆಯಾಗಿರುತ್ತದೆ. ಅದನ್ನು ಮಂಡಿಸಲು ಸರ್ಕಾರದ ಮುಖ್ಯಸ್ಥರಿಗೆ ಅವಕಾಶವಿರುತ್ತದೆ. ಮೈತ್ರಿ ಸರ್ಕಾರವಾದಾಗ ಮೈತ್ರಿ ಸರ್ಕಾರದ ಮುಖಂಡರು ಅದಕ್ಕೆ ಅವಕಾಶ ನೀಡಬೇಕೇ ಹೊರತು ಅಡಚಣೆ ಮಾಡಬಾರದು. ಆದರೆ ಸಾಕಷ್ಟು ಅನುಭವವಿರುವ ಸಿದ್ದರಾಮಯ್ಯನವರು ಏಕೆ ಈ ರೀತಿ ಹೇಳಿದ್ದಾರೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪೂರ್ಣ ಬಜೆಟ್ ಮಂಡಿಸುತ್ತೇನೆ ಎಂದು ಹಠ ಹಿಡಿದಿದ್ದಾರೆ. ಸಿದ್ದರಾಮಯ್ಯನವರು ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂಬ ಹೇಳಿಕೆ ನಂತರವೂ ಎಚ್.ಡಿ.ಕುಮಾರಸ್ವಾಮಿ ಪೂರ್ಣ ಬಜೆಟ್ ಮಂಡಿಸಿದರೆ ಸಿದ್ದರಾಮಯ್ಯನವರ ಮಾತಿಗೆ ಬೆಲೆ ಇಲ್ಲದಂತಾಗುತ್ತದೆ. ಆಗ ಮತ್ತೆ ಬಣ ರಾಜಕೀಯ ಶುರುವಾಗುತ್ತದೆ.
ಸಂಪುಟ ರಚನೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉಂಟಾದ ಎಲ್ಲಾ ಬಂಡಾಯ, ಭಿನ್ನಮತ ತಣ್ಣಗಾಗಿದೆ ಎಂಬ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ರಾಜಕೀಯ ರಾಡಿಯನ್ನು ಉಂಟುಮಾಡಿದೆ.

ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಮಾರ್ಗದರ್ಶಕರಾಗಿರಬೇಕು. ಅದನ್ನು ಬಿಟ್ಟು ಅಡ್ಡಗಾಲಾಗಬಾರದು ಎಂದು ಕೆಲ ಕಾಂಗ್ರೆಸ್‍ನ ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಬಂಡಾಯವೆದ್ದು ದೆಹಲಿಗೆ ಹೋಗಿ ಬಂದ ನಂತರ ತಣ್ಣಗಾಗಿದ್ದರು. ಕಾಂಗ್ರೆಸ್ ವಲಯದಲ್ಲಿ ಗುಂಪುಗಾರಿಕೆಯು ತಣ್ಣಗಾಗಿತ್ತು. ಅತೃಪ್ತರು ನಡೆಸುವ ಸಭೆಗಳಿಗೆಲ್ಲ ಹೈಕಮಾಂಡ್ ಬ್ರೇಕ್ ಹಾಕಿತ್ತು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಹೇಳಿಕೆ ಮತ್ತೊಂದು ಕೋನದ ಭಿನ್ನಮತ ಸೃಷ್ಟಿಸುವ ಸಾಧ್ಯತೆ ಇದೆ ಎಂಬ ಆತಂಕ ಸೃಷ್ಟಿಯಾಗಿದೆ. ಸಮನ್ವಯ ಸಮಿತಿಯಲ್ಲಿ ಇಂಥ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಈ ರೀತಿ ಬಹಿರಂಗವಾಗಿ ಚರ್ಚಿಸಬಾರದು ಎಂದು ಹಲವರು ತಮ್ಮ ಅತೃಪ್ತಿ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.
ಸಮ್ಮಿಶ್ರ ಸರ್ಕಾರ ಬಂದಾಗಿನಿಂದ ಆಡಳಿತಾತ್ಮಕ ಅಭಿವೃದ್ಧಿ ವಿಷಯಗಳು ಬದಿಗೆ ಸರಿದಿದ್ದು, ಕೇವಲ ಬಂಡಾಯ, ಭಿನ್ನಮತ, ವಿವಾದಗಳೇ ವಿಜೃಂಭಿಸುತ್ತಿವೆ. ಶೀಘ್ರವೇ ಇದಕ್ಕೆಲ್ಲ ತೆರೆ ಎಳೆದು ಸರ್ಕಾರ ಸುಗಮವಾಗಿ ಸಾಗಬೇಕಾಗಿದೆ. ಜನರಿಗೆ ಸ್ಥಿರತೆಯ ಭರವಸೆ ಮೂಡಿಸಬೇಕಾದ ಹೊಣೆಗಾರಿಕೆ ಉಭಯ ಪಕ್ಷಗಳ ನಾಯಕರ ಮೇಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ