ಬೆಂಗಳೂರು:ಜೂ-17: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಫ್ಘಾನಿಸ್ತಾನದ ವಿರುದ್ದ ಭಾರತ ಭರ್ಜರಿ ಗೆಲುವು ಸಾಧಿಸಿದರೂ, ಟ್ರೋಫಿಯನ್ನು ಮಾತ್ರ ಆಫ್ಘಾನಿಸ್ತಾನಕ್ಕೆ ನೀಡಿ ಕ್ರೀಡಾಸ್ಪೂರ್ತಿ ಮೆರೆದಿದೆ.
ಪಂದ್ಯ ಮುಕ್ತಾಯದ ಬಳಿಕ ನಡೆದ ಪ್ರಶಸ್ತಿ ವಿತರಣೆ ಮತ್ತು ಫೋಟೋ ಸೆರಮನಿ ವೇಳೆ ಭಾರತ ತಂಡದ ನಾಯಕ ಅಂಜಿಕ್ಯಾ ರಹಾನೆ ಅಲ್ಲೇ ಪಕ್ಕದಲ್ಲೇ ನಿಂತು ಇದನ್ನು ವೀಕ್ಷಿಸುತ್ತಿದ್ದ ಆಫ್ಘಾನಿಸ್ತಾನ ಆಟಗಾರರನ್ನು ಕರೆದು ಜಂಟಿಯಾಗಿ ಪೋಸ್ ನೀಡುವಂತೆ ಹೇಳಿದರು. ರಹಾನೆ ಮಾತಿನಂತೆ ಆಗಮಿಸಿದ ಆಫ್ಘನ್ ಆಟಗಾರರು ಭಾರತ ತಂಡದ ಆಟಗಾರರೊಂದಿಗೆ ಪೋಸ್ ನೀಡಿದ್ದು ಮಾತ್ರವಲ್ಲದೇ ಟ್ರೋಫಿಯನ್ನೂ ಹಿಡಿದು ಸಂಭ್ರಮಿಸಿದರು.
ಇನ್ನು ಪಂದ್ಯ ಸೋತರೂ ಆಫ್ಘಾನಿಸ್ತಾನ ಮಾತ್ರ ಎಂದಿಗೂ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಸುಧೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಆತಿಥ್ಯ ನೀಡಿದ ರಹಾನೆ ನಡೆ ಇತರೆ ಆಟಗಾರರಿಗೆ ಮಾದರಿಯಾಗಿದೆ. ಟೀಂ ಇಂಡಿಯಾ ನಾಯಕ ರಹಾನೆ ಕ್ರೀಡಾ ಸ್ಪೂರ್ತಿ ಮತ್ತು ಆತಿಥ್ಯಕ್ಕೆ ಕ್ರಿಕೆಟ್ ದಿಗ್ಗಜರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.