ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡು ಕಣ್ಣೀರಿಟ್ಟ ವಾಗ್ಮೋರೆ!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ್ ವಾಗ್ಮೋರೆ ಎಸ್ ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಧರ್ಮ ಎನ್ನುವ ವಿಚಾರ ಒಂದೇ ನನ್ನ ತಲೆಯಲ್ಲಿತ್ತು. ಗೌರಿ ಲಂಕೇಶ್ ಅವರನ್ನು ಕೊಂದರೆ ಧರ್ಮ ಉಳಿಯತ್ತೆ ಅಂತಾ ಹಿರಿಯರು ಹೇಳಿದ್ದರು ಅದಕ್ಕೆ ಕೊಂದು ಮುಗಿಸಿದೆ. ಗೌರಿ ಲಂಕೇಶ್ ಬಗ್ಗೆ ನನ್ನ ಹಿರಿಯರು ಹೇಳುವಾಗ ಆಕೆ ಒಬ್ಬ ಧರ್ಮ ವಿರೋಧಿ ಎಂದು ನನ್ನ ರಕ್ತ ಕುದಿಯುತ್ತಿತ್ತು. ಅದಕ್ಕೆ ಆಕೆಯನ್ನು ಕೊಂದು ಹಾಕಿದೆ ಎಂದಿದ್ದಾನೆ.

ಗೌರಿ ಮುಖವನ್ನು ನಾನು ನೋಡಿರಲೇ ಇಲ್ಲ. ಕೊಲೆ ಮಾಡುವುದಕ್ಕೆ ಇನ್ನೂ ನಾಲ್ಕು ದಿನ ಇರುವಾಗಲೇ ಯ್ಯೂಟ್ಯೂಬ್ ನಲ್ಲಿ ಆಕೆಯನ್ನು ನೋಡಿ ಆಕೆಯ ಬಗ್ಗೆ ತಿಳಿದುಕೊಂಡಿದ್ದೆ. ಆಗಲೇ ನನಗೆ ಆಕೆ ಎಷ್ಟು ಹಿಂದೂ ವಿರೋಧಿ ಎಂದು ತಿಳಿಯಿತು. ಅದಕ್ಕೆ ಅವರು ಹಿಂದೂ ವಿರೋಧಿ ಎಂದು ನಿರ್ಧರಿಸಿ ಅವರನ್ನು ಕೊಂದೆ. ಗೌರಿಯನ್ನು ಕೊಂದ ನಂತರ ನನ್ನಿಂದ ಧರ್ಮ ಉಳಿಯಿತು, ಧರ್ಮಕ್ಕೆ ನಾನು ಅಳಿಲು ಸೇವೆ ಮಾಡಿದೆ ಎಂಬ ಹೆಮ್ಮೆಯಿಂದಲೇ ಮನೆಗೆ ಹೋದೆ ಎಂದು ವಾಗ್ಮೋರೆ ಬಾಯ್ಬಿಟ್ಟಿದ್ದಾನೆ. ಆದರೆ ನನಗೆ ಈಗ ಪಶ್ಚಾತಾಪ ಆಗುತ್ತಿದೆ. ನನ್ನ ತಂದೆ-ತಾಯಿ ಏನು ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ ಎಂದು ತನ್ನ ಮನದಾಳದಿಂದ ಎಸ್ ಐಟಿ ಮುಂದೆ ವಾಗ್ಮೋರೆ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ನನ್ನ ಹಿರಿಯರು ತನಗೆ ಗೌರಿಯನ್ನು ಕೊಲ್ಲುವಂತೆ ಹೇಳಿದ್ದಕ್ಕೆ ನಾನು ಈ ಕೊಲೆ ಮಾಡಲು ಮುಂದಾದೆ ಎಂದೂ ಕಣ್ಣೀರಿಟ್ಟಿದ್ದಾನೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ