ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಸಜ್ಜಾದ ಹೈಕಮಾಂಡ್

 

ಬೆಂಗಳೂರು, ಜೂ.16-ಕಾಂಗ್ರೆಸ್‍ನಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಬಂಡಾಯ ಶಮನಗೊಳಿಸಲು ಮುಂದಾಗಿರುವ ಹೈಕಮಾಂಡ್ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಸಜ್ಜಾಗಿದೆ.
ಮುಂದಿನ ವಾರ ಮತ್ತೊಂದು ಹಂತದ ಸಂಪುಟ ವಿಸ್ತರಣೆ ಮಾಡಿ ನಾಲ್ವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಭಿನ್ನಮತ ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ.

ಹಿರಿಯ ಶಾಸಕರಲ್ಲಿ ಒಬ್ಬರು, ಲಿಂಗಾಯತ ಸಮುದಾಯದಿಂದ ಇಬ್ಬರು, ಕುರುಬ ಸಮುದಾಯದಿಂದ ಒಬ್ಬರು ಸೇರಿದಂತೆ ನಾಲ್ವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ವರಿಷ್ಠರು ತೀರ್ಮಾನಿಸಿದ್ದಾರೆ. ಮಧ್ಯ ಕರ್ನಾಟಕ ಭಾಗದಿಂದ ಬಿ.ಸಿ.ಪಾಟೀಲ್ ಅಥವಾ ಸಂಗಮೇಶ್, ಹೈದರಾಬಾದ್-ಕರ್ನಾಟಕದಿಂದ ಅಮರೇಗೌಡ ಬೈಯ್ಯಾಪುರ, ಶರಣ ಬಸಪ್ಪ ದರ್ಶನಾಪುರ ಅಥವಾ ಎಂ.ಬಿ.ಪಾಟೀಲ್ ಈ ಮೂವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಸಂಪುಟದಲ್ಲಿ ಲಿಂಗಾಯತರಿಗೆ ಪ್ರಾತಿನಿಧ್ಯ ಇಲ್ಲ ಎಂಬ ಕೊರಗನ್ನು ನೀಗಿಸಲು ಇಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಹಿರಿಯ ಶಾಸಕರಲ್ಲಿ ಎಚ್.ಕೆ.ಪಾಟೀಲ್ ಅಥವಾ ರಾಮಲಿಂಗಾರೆಡ್ಡಿ ಇಬ್ಬರಲ್ಲಿ ಒಬ್ಬರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕುರುಬ ಸಮುದಾಯದಿಂದ ಒಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ಕ್ರಮ ವಹಿಸಿದೆ.
ನಾಳೆ ನವದೆಹಲಿಯಲ್ಲಿ ನಡೆಯುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದು, ಕಾಂಗ್ರೆಸ್ ಹೈಕಮಾಂಡ್ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಸಂಪುಟಕ್ಕೆ ಸೇರುವವರ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಾರ ಎರಡನೇ ಹಂತದ ಸಂಪುಟ ವಿಸ್ತರಣೆಯಾಗಲಿದ್ದು, ನಾಲ್ವರು ನೂತನ ಸಚಿವರು ಸಂಪುಟಕ್ಕೆ ಸೇರಲಿದ್ದಾರೆ.
ಈಗಾಗಲೇ ಕಾಂಗ್ರೆಸ್‍ನಿಂದ 15 ಮಂದಿ ಶಾಸಕರು ಸಚಿವರಾಗಿದ್ದು, ಹೊಸದಾಗಿನಾಲ್ವರು ಸೇರ್ಪಡೆಗೊಂಡರೆ ಒಟ್ಟು 19 ಜನ ಸಚಿವರಾಗುತ್ತಾರೆ. ಇನ್ನೂ ಮೂರು ಸ್ಥಾನ ಖಾಲಿ ಉಳಿಯಲಿದ್ದು, ಮುಂದಿನ ದಿನಗಳಲ್ಲಿ ಅದನ್ನು ಭರ್ತಿ ಮಾಡಲಿದ್ದಾರೆ.
ಎರಡು ವಾರಗಳ ನಂತರ ನಿಗಮ ಮಂಡಳಿಗಳಿಗೂ ನೇಮಕಾತಿ ನಡೆಯಲಿದೆ. ಅತೃಪ್ತ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಪದವಿ ನೀಡಲಿದ್ದಾರೆ. ಈಗಾಗಲೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ