ಮೈಸೂರು:ಜೂ-16: ಜಾನುವಾರು ಅಕ್ರಮ ಸಾಗಣೆ ಮೂರು ಪ್ರತ್ಯೇಕ ಪ್ರಕರಣವನ್ನು ಪತ್ತೆ ಹಚ್ಚಿರುವ ಹುಣಸೂರು ಗ್ರಾಮಾಂತರ ಪೊಲೀಸರು 30 ಜಾನುವಾರು, ಮೂರು ವಾಹನ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಅನ್ಸರ್, ಪಿರಿಯಾಪಟ್ಟಣ ತಾಲೂಕು ಹಲಗನಹಳ್ಳಿಯ ಸೈಯದ್ ಸರ್ಫೆಜ್ ಬಂಧಿತರು. ಎರಡು ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. 30 ಜಾನುವಾರುಗಳನ್ನು ಮೈಸೂರಿನ ಪಿಂಜಿರಾಪೋಲ್ಗೆ ಕಳುಹಿಸಲಾಗಿದೆ.
ಕಟ್ಟೆಮಳಲವಾಡಿಗೆ ಚುಂಚನಕಟ್ಟೆ ಕಡೆಯಿಂದ ಜಾನುವಾರುಗಳನ್ನು ವಾಹನದಲ್ಲಿ ತುಂಬಿಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಟ್ಟೆಮಳಲವಾಡಿ ಬಳಿ ವಾಹನವನ್ನು ವಶಕ್ಕೆ ಪಡೆದು ಅದರಲ್ಲಿದ್ದ ಎಮ್ಮೆ ಕರು ಸೇರಿದಂತೆ 7 ಜಾನುವಾರುಗಳನ್ನು ಬಂಧಮುಕ್ತಗೊಳಿಸಿ ಚಾಲಕ ಸೈಯದ್ ಸರ್ಫೆಜ್ ಮತ್ತು ಅನ್ಸರ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ರತ್ನಪುರಿಯಲ್ಲಿ ಸಾಗಣೆ ಮಾಡುತ್ತಿದ್ದ ವಾಹನ ತಡೆದು ಪರಿಶೀಲಿಸಿ 4ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ರತ್ನಪುರಿಗೆ ಸಮೀಪದ ಕುಡಿನೀರುಮುದ್ದನಹಳ್ಳಿ ಬಳಿ ವಾಹನದಲ್ಲಿ ಸಾಗಿಸುತ್ತಿದ್ದ 19 ರಾಸುಗಳನ್ನು ವಶಕ್ಕೆ ಪಡೆದರು. ವಾಹನ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.