ಮಗಳ ರೇಪ್‌ ಆರೋಪಿ ಅಪ್ಪ ಕೋರ್ಟ್‌ನಲ್ಲೇ ಪತ್ನಿಯ ಕತ್ತು ಸೀಳಿ ಕೊಂದ

ಗುವಾಹಟಿ : ತನ್ನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯು ದಿಬ್ರೂಗಢ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಲಯದ ಆವರಣದಲ್ಲಿ ತನ್ನ ಪತ್ನಿಯನ್ನು ಕತ್ತು ಸೀಳಿ ಕೊಂದ ಘಟನೆ ವರದಿಯಾಗಿದೆ.

ಆರೋಪಿ ತನ್ನ ಪತ್ನಿಯ ಕತ್ತು ಸೀಳುವುದನ್ನು ಕಾಣುತ್ತಲೇ ಕೋರ್ಟ್‌ ಆವರಣದಲ್ಲಿದ್ದ ಜನರು ಆರೋಪಿ ಪೂರ್ಣ ನೇಹಾರ್‌ ದೇಕಾ ನ ಮೇಲೆ ಮುಗಿಬಿದ್ದು ಆತನನ್ನು ಪೊಲೀಸರಿಗೆ ಒಪ್ಪಿಸಿದರು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಮಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ  ಬೇಲ್‌ ಪಡೆದಿದ್ದ ಆರೋಪಿ ಪೂರ್ಣ ನೇಹಾರ್‌ ದೇಕಾ ಕೋರ್ಟ್‌ ಕಾರಿಡಾರ್‌ನಲ್ಲೇ ಪತ್ನಿಯ ಕತ್ತು ಸೀಳಿ ಕೊಂದ ಎಂದು ದೀಬ್ರೂಗಢ ಡಿವೈಎಸ್‌ಪಿ ಪ್ರದೀಪ್‌ ಸೈಕಿಯಾ ತಿಳಿಸಿದರು.

ಮಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕಳೆದ 9 ತಿಂಗಳಿಂದ ಜೈಲಿನಲ್ಲಿದ್ದ ಆರೋಪಿಯು ಕೆಲ ದಿನಗಳ ಹಿಂದಷ್ಟೇ ಬೇಲ್‌ನಲ್ಲಿ ಹೊರಬಂದಿದ್ದ; ನಿನ್ನೆ ಶುಕ್ರವಾರ ಆತನ ವಿಚಾರಣೆ ಇತ್ತು. ಮಗಳ ರೇಪ್‌ ಕೇಸಿನಲ್ಲಿ  ಪೊಲೀಸರಿಗೆ ದೂರು ನೀಡಿದ್ದ ಆತನ ಪತ್ನಿ ಕೂಡ ಕೋರ್ಟಿಗೆ ಬಂದಿದ್ದಳು. ಆರೋಪಿಯು ಕೋರ್ಟ್‌ ಕಾರಿಡಾರ್‌ನಲ್ಲಿ ಪತ್ನಿಯನ್ನು ಕಾಣುತ್ತಲೇ ಇದ್ದಕ್ಕಿದ್ದಂತೆಯೇ ತನ್ನ ಕಿಸೆಯಲ್ಲಿದ್ದ ಹರಿತವಾದ ಚೂರಿಯನ್ನು ಹೊರತೆಗೆದು ಪತ್ನಿಯ ಕತ್ತು ಸೀಳಿದ. ಒಡನೆಯೇ ಆಕೆಯನು ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು ಎಂದು ಘಟನೆಯ ಮಾಹಿತಿ ನೀಡಿದ ದೀಬ್ರೂಗಢ ಪೊಲೀಸ್‌ ಠಾಣಾಧಿಕಾರಿ ಸಿದ್ದೇಶ್ವರ ಬೋರಾ ಹೇಳಿದರು.

ಆರೋಪಿಯ ಅತ್ತೆ ಮಾವ ಕೂಡ ಕೋರ್ಟಿಗೆ ಬಂದಿದ್ದರು. ಕೋರ್ಟ್‌ ಕಾರಿಡಾರ್‌ನಲ್ಲಿ  ಆರೋಪಿಯು ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದಂತೆಯೇ ಆತ ಆಕೆಯ ಕತ್ತು ಸೀಳಿದ ಎಂದು ಠಾಣಾಧಿಕಾರಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ