ಶ್ರೀನಗರ:ಜೂ-15: ತನ್ನ ಮಗನನ್ನು ಅಪಹರಿಸಿ, ಹತ್ಯೆಗೈದ ಉಗ್ರರನ್ನು 72 ಗಂಟೆಗಳಲ್ಲು ಹುಡುಕಿ ಸಾಯಿಸಿ ಎಂದು ಹತ್ಯೆಯಾದ ಯೋಧ ಔರಂಗಜೇಬ್ ತಂದೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಹತ್ಯೆಯಾದ ಯೋಧ ಔರಂಗಜೇಬ್ ತಂದೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಪುತ್ರನನ್ನು ಹತ್ಯೆಗೈದವರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹಂತಕರ ವಿರುದ್ಧ ಕ್ರಮಕೈಗೊಳ್ಳಲು ಭಾರತ ಸರ್ಕಾರವನ್ನು ಯಾವ ಶಕ್ತಿ ತಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಹಂತಕರನ್ನು ಹುಡುಕಿ ಹತ್ಯೆ ಮಾಡಲು ಕೇಂದ್ರ ಸರ್ಕಾರಕ್ಕೆ ಈ ಮೂಲಕ 72 ಗಂಟೆಗಳ ಕಾಲ ಗಡುವು ನೀಡುತ್ತಿದ್ದೇನೆ. 72 ಗಂಟೆಗಳಲ್ಲಿ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಹೋದರೆ, ಪುತ್ರನನ್ನು ಹತ್ಯೆಗೈದವರ ವಿರುದ್ಧ ನಾನು ದ್ವೇಷ ತೀರಿಸಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.
ಔರಂಗಜೇಬ್ ಅವರ ತಂದೆ ಕೂಡ ನಿವೃತ್ತ ಯೋಧರಾಗಿದ್ದು, ಪುತ್ರನ ಹತ್ಯೆ ಪ್ರಕರಣ ಕುರಿತಂತೆ ರಾಜಕೀಯ ಮಾಡುತ್ತಿರುವವರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಪುತ್ರನ ಹತ್ಯೆ ನಮ್ಮ ಕುಟುಂಬಕ್ಕೆ ಆದ ಹಿನ್ನಡೆಯಷ್ಟೇ ಅಲ್ಲ. ಸೇನೆಗೂ ಕೂಡ ಹಿನ್ನಡೆಯುಂಟಾಗಿದೆ. 2003ರಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕಲು ಸರ್ಕಾರಕ್ಕೆ ಆಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವಾದರೂ ಪರಿಸ್ಥಿತಿ ಸುಧಾರಿಸಬಹುದು ಎಂದುಕೊಂಡಿದ್ದೆವು. ಆದರೆ, ಇದರಿಂದ ಅಂತಹ ದೊಡ್ಡ ಬದಲಾವಣೆಗಳಾವುದೂ ಕಂಡು ಬರಲಿಲ್ಲ.
ತಮ್ಮ ಮಗನ ಸಾವಿನಲ್ಲಿ ರಾಜಕೀಯ ಮಾಡುತ್ತಿರುವ ಪ್ರತ್ಯೇಕತಾವಾದಿಗಳು ಹಾಗೂ ಇತರರನ್ನು ಕಾಶ್ಮೀರದಿಂದಲೇ ಹೊರ ಹಾಕಬೇಕು. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವವರ ವಿರುದ್ಧ ಭದ್ರತಾ ಪಡೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಾರಿಯ ರಂಜಾನ್ ಹಬ್ಬವನ್ನು ಪುತ್ರನೊಂದಿಗೆ ಆಚರಿಸಬೇಕೆಂದು ಆಸೆ ಪಟ್ಟಿದ್ದೆವು. ಆದರೆ, ಆ ಆಸೆ ಪೂರ್ಣಗೊಳ್ಳಲೇ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
Jammu and Kashmir, Soldier Aurangzeb, Father Deadline, Centre