ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಲ್ಲಿ ಇನ್ನು ಹಿರಿಯರಿಗೆ ಅವಕಾಶಗಳು ಇಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಕಿರಿಯ ಶಾಸಕರ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರಾತ್ರಿ ಎರಡು ಗಂಟೆಗೆ ಗುಪ್ತ ಸಭೆ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಯುವಕರ ಹೊಸ ತಂಡ ಕಟ್ಟಲು ಮುಂದಾಗಿದ್ದು, ಅವರ ಕನಸು ನನಸು ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಬುಧವಾರ ಮಧ್ಯರಾತ್ರಿ ಗುಪ್ತ್ ಗುಪ್ತ್ ಮೀಟಿಂಗ್ ನಡೆದಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ನೂತನ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅನುಭವಿಗಳನ್ನ ಆಯ್ಕೆ ಮಾಡಬೇಕು ಎಂಬುದು ರಾಜ್ಯ ಹಿರಿಯ ನಾಯಕರ ವಾದವಾಗಿದೆ. ಆದರೆ ಯುವ ಮುಖಕ್ಕೆ ರಾಜ್ಯ ಕಾಂಗ್ರೆಸ್ ಹೊಣೆ ನೀಡಬೇಕು ಎಂಬುದು ಯುವ ನಾಯಕರುಗಳ ವಾದವಾಗಿದೆ. ವಾದ ಪ್ರತಿ-ವಾದಗಳ ನಡುವೆಯೇ ವೇಣುಗೋಪಾಲ್ ನಗರದ ಖಾಸಗಿ ಹೋಟೆಲ್ ನಲ್ಲಿ ರಾತ್ರಿ 2 ಗಂಟೆಗೆ ಯುವ ಶಾಸಕರುಗಳ ಸಭೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನವೇರಲು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಇಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯದ ಕೆಲವು ಸಂಸದರು ಮತ್ತು ಸಚಿವರು ಸೇರಿದಂತೆ ಹಿರಿಯರೇ ಅಡ್ಡಗಾಲು ಹಾಕಿದ್ದಾರೆ. ಇವೆಲ್ಲವನ್ನು ಮೀರಿ ದಿನೇಶ್ ಗುಂಡುರಾವ್, ಕೃಷ್ಣಬೈರೇಗೌಡ, ರಿಜ್ವಾನ್ ಅರ್ಷದ್ ರ ತಂಡ ದಿನೇಶ್ ಗುಂಡೂರಾವ್ ಪರ ಲಾಬಿ ಆರಂಭಿಸಿದೆ ಎಂದು ತಿಳಿದುಬಂದಿದೆ.
ಈ ಮೂವರು ಕಿರಿಯ ಶಾಸಕರ ಜೊತೆ ವೇಣುಗೋಪಾಲ್ ರಾತ್ರಿ ಎರಡು ಗಂಟೆಗೆ ಗುಪ್ತ ಸಭೆ ನಡೆಸಿದ್ದಾರೆ. ರಾಹುಲ್ ಗಾಂಧಿಯವರ ಯುವ ನಾಯಕತ್ವ ಕನಸಿಗೆ ನೀರೆರೆಯಲು ವೇಣುಗೋಪಾಲ್ ಮುಂದಾಗಿದ್ದು, ದಿನೇಶ್ ಗುಂಡೂರಾವ್ ನಾಯಕತ್ವಕ್ಕೆ ಯುವ ಶಾಸಕರುಗಳು ಸಾಥ್ ನೀಡಿದ್ದಾರೆ ಎನ್ನಲಾಗಿದ್ದು, ಈಗ ಹಿರಿಯರ ನಡೆ ಏನು ಎನ್ನುವ ಕುತೂಹಲ ಮೂಡಿದೆ.