ಸಾಮಾಜಿಕ ಅರಣ್ಯ ಇಲಾಖೆ ಬಲಪಡಿಸಿ ಗ್ರಾಮ ಪಂಚಾಯತಗಳು ಹಸಿರು ಅನುದಾನ ಫಲಪ್ರದ ಮಾಡಲಿ

sdr

ಶಿರಸಿ: ಶಿರಸಿ ತಾಲೂಕ ಭೈರುಂಭೆ ಪಂಚಯತದ ದೇವರ ಕೇರಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಶಾಲಾವನ ನಿರ್ಮಾಣ ಯೋಜನೆ ಆರಂಭಿಸಿತು. ಶಾಲಾ ಮಕ್ಕಳು ವನದಲ್ಲಿ ಗಿಡನೆಟ್ಟರು. ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಅಭಿವೃದ್ಧಿ ಕುರಿತು ವಿಶೇಷ ಸಮಾಲೋಚನಾ ಸಭೆ ನಡೆಸಲಾಯಿತು. ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಸಾಮಾಜಿಕ ಅರಣ್ಯ ಇಲಾಖೆ ಮೂಲಕ ಗ್ರಾಮ ಪಂಚಾಯತಗಳು ವನೀಕರಣ ಕಾರ್ಯಕೈಗೆತ್ತಿಕೊಳ್ಳಬೇಕು. 18% ಅನುದಾನವನ್ನು ಪಂಚಾಯತಗಳು ಅರಣ್ಯ ಅಭಿವೃದ್ಧಿಗೆ ವಿನಿಯೋಗಿಸಬೇಕು. ಈ ವರ್ಷ ಸಾಮಾಜಿಕ ಅರಣ್ಯ ವಿಭಾಗ ನರ್ಸರಿ ಯೋಜನೆ ಶುರು ಮಾಡಿದೆ ಎಂಬುದು ಸಂತಸದ ಸಂಗತಿ ಎಂದರು.
ಜಿಲ್ಲಾಪಂಚಾಯತ ವತಿಯಿಂದ ಸಾಮಾಜಿಕ ಅರಣ್ಯ, ಬಯೋಗ್ಯಾಸ್, ಜೈವಿಕ ಇಂಧನ, ಔಷಧೀ ಸಸ್ಯಗಳು, ಸಾಂಬಾರು ವೃಕ್ಷಗಳನ್ನು ಬೆಳೆಸಲು ಯೋಜನೆ ರೂಪಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಜಿಲ್ಲಾ ಪಂಚಾಯತ ಸದಸ್ಯ ಜಿ. ಎನ್. ಹೆಗಡೆ ಮುರೇಗಾರ ಅವರು ವನೀಕರಣ, ಅರಣ್ಯ ರಕ್ಷಣೆ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಜೂನ್ 5 ರಂದು ಭಾಷಣ ಮಾಡಿದರೆ ಸಾಲದು. ಈ ಬಗ್ಗೆ ವಿಶೇಷ ಯೋಜನೆ ರೂಪಿಸಿ ಜಾರಿಗೆ ತರಬೇಕು ಎಂದು ಕರೆ ನೀಡಿದರು. ತಮ್ಮ ಜಿಲ್ಲಾಪಂಚಾಯತ ಕ್ಷೇತ್ರದ 10 ಪಂಚಾಯತಗಳಲ್ಲಿ ಮಾದರಿ ಯೋಜನೆ ತಯಾರಿಸಿ ಜಾರಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಉಷಾ ಸ್ವಾಗತಿಸಿದರು. ಗ್ರಾಮಪಂಚಾಯತ ಅಧ್ಯಕ್ಷ ಜಯಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಅರಣ್ಯ ಸಮೀತಿ ಅಧ್ಯಕ್ಷ ವಿಶ್ವನಾಥ , ಪಂಚಾಯತ ಅಭಿವೃದ್ಧಿ ಅಧಿಕಾರಿ ದತ್ತಾತ್ರಯ ಭಟ್ಟ , ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ದತ್ತಾ ಮರಾಠೆ, ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ನಾಗರಾಜ ನಾಯ್ಕ ವಂದನೆ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ