ಸರ್ಕಾರಿ ಭೂಮಿ ಖಾಲಿ ಇರುವ ಕುರಿತು ಸಮೀಕ್ಷೆ ನಡೆಸಿ ಎರಡು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ನೀಧಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚನೆ

 

ಬೆಂಗಳೂರು, ಜೂ.14- ರಾಜ್ಯಾದ್ಯಂತ ಸರ್ಕಾರಿ ಭೂಮಿ ಖಾಲಿ ಇರುವ ಕುರಿತು ಸಮೀಕ್ಷೆ ನಡೆಸಿ ಎರಡು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೇಂದ್ರ ಸರ್ಕಾರ 2020ರ ವೇಳೆಗೆ ಎಲ್ಲರಿಗೂ ಮನೆ ನಿರ್ಮಿಸಿಕೊಡುವ ಗುರಿ ಹೊಂದಿರುವುದಾಗಿ ಹೇಳಿಕೊಂಡಿದೆ. ನಮ್ಮ ಸರ್ಕಾರ ಐದು ವರ್ಷದಲ್ಲಿ ಐದು ಲಕ್ಷ ಮನೆ ನಿರ್ಮಿಸುವ ಉದ್ದೇಶಹೊಂದಿದೆ. ಅದರಲ್ಲಿ ಬೆಂಗಳೂರಿನಲ್ಲೇ 2 ಲಕ್ಷ ಮನೆ ನಿರ್ಮಿಸಬೇಕಿದೆ ಎಂದರು.

ವಸತಿ ರಹಿತರಿಗೆ ನಿವೇಶನ ಮತ್ತು ಮನೆ ಒದಗಿಸುವುದು ಸರ್ಕಾರದ ಕರ್ತವ್ಯ. ಇದಕ್ಕಾಗಿ ಭೂಮಿ ಬೇಕು. ಅಧಿಕಾರಿಗಳು ರಾಜ್ಯಾದ್ಯಂತ ಸಮೀಕ್ಷೆ ನಡೆಸಬೇಕು. ಎರಡು ತಿಂಗಳ ಒಳಗಾಗಿ ಸರ್ಕಾರಕ್ಕೆ ಎಲ್ಲೆಲ್ಲಿ ಖಾಲಿ ಜಾಗ ಇದೆ. ಅದರಲ್ಲಿ ಎಷ್ಟು ಭೂಮಿಯನ್ನು ವಸತಿ ನಿರ್ಮಾಣಕ್ಕೆ ಉಪಯೋಗಬೇಕು ಎಂಬ ಸಮಗ್ರ ವರದಿ ಸರ್ಕಾರದ ಬಳಿ ಇರಬೇಕು. ಅದನ್ನು ಆಧರಿಸಿ ಮುಂದಿನ ದಿನಗಳಲ್ಲಿ ವಸತಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ವಸತಿ ಯೋಜನೆಗಳು ಸಾಕಷ್ಟು ವರ್ಷಗಳಿಂದ ಜಾರಿಯಲ್ಲಿವೆ. ಸರ್ಕಾರ ಮನೆ ಮಂಜೂರು ಮಾಡಿದರೂ ಫಲಾನುಭವಿಗೆ ಯೋಜನೆ ತಲುಪಿಸಲು ಪಿಡಿಒಗಳು ಲಂಚ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದು ಹೇಳಿದರು.
ಖಾತೆ, ಪಹಣಿಗಾಗಿ ರೈತರು ಮೂರ್ನಾಲ್ಕು ತಿಂಗಳು ತಹಸೀಲ್ದಾರ್ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದು ತಪ್ಪಬೇಕು. ಇನ್ನು ಮುಂದೆ ಖಾತೆ, ಪಹಣಿಗಳನ್ನು ತಕ್ಷಣ ಮಾಡಿಕೊಡುವ ವ್ಯವಸ್ಥೆಯನ್ನು ಅಧಿಕಾರಿಗಳು ಜಾರಿಗೆ ತರಬೇಕೆಂದು ಸಿಎಂ ಕಟ್ಟಪ್ಪಣೆ ಮಾಡಿದರು.

ಒಳ್ಳೆಯ ಅಧಿಕಾರಿಗಳಿಗೆ ರಕ್ಷಣೆ:
ನಮ್ಮ ಸರ್ಕಾರ ಒಳ್ಳೆಯ ಅಧಿಕಾರಿಗಳಿಗೆ ರಕ್ಷಣೆ ನೀಡುತ್ತದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹೇಳಿದ ಕೆಲಸಗಳನ್ನು ಅಧಿಕಾರಿಗಳು ಮಾಡಬೇಕು. ಅದರಂತೆ ಜನಪರವಾದ ಯೋಜನೆಗಳು ಕೂಡ ಅರ್ಹ ಫಲಾನುಭವಿಗಳಿಗೆ ತಲುಪಬೇಕು.
ಸರ್ಕಾರ ಯೋಜನೆ ರೂಪಿಸಿದರೆ ಅದನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಜತೆಯಾಗಿ ಕೆಲಸ ಮಾಡಬೇಕು. ನಾವೆಲ್ಲ ಒಂದು ಕುಟುಂಬದ ವ್ಯವಸ್ಥೆಯಂತೆ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ.
ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ನಮ್ಮ ಸರ್ಕಾರ ಅಗತ್ಯವಾದ ಎಲ್ಲಾ ರಕ್ಷಣೆ ಒದಗಿಸಲು ಬದ್ಧವಾಗಿದೆ. ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. ಎಷ್ಟೇ ಒತ್ತಡ ಬಂದರೂ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ನಿಮಗೆ ಅಗತ್ಯವಾದ ಸಹಕಾರ ನೀಡಲು ಬದ್ಧವಾಗಿದ್ದೇವೆ ಎಂದು ಸಿಎಂ ಹೇಳಿದರು.
ನಮ್ಮ ಸರ್ಕಾರ ವಸತಿ, ಶಿಕ್ಷಣ, ಆರೋಗ್ಯ, ಕೃಷಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಂಡು ಜನಪರವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಉದ್ಯೋಗ ಮೇಳಗಳಿಂದ ಆಗುವ ಪ್ರಯೋಜನಗಳೇನು:
ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಿದೆ. ಉದ್ಯೋಗ ಸೃಷ್ಟಿಸಲು ಹೆಚ್ಚು ಆದ್ಯತೆ ನೀಡಬೇಕಿದೆ. ಉದ್ಯೋಗ ಸೃಷ್ಟಿಯ ನೆಪದಲ್ಲಿ ಎಲ್ಲೆಡೆ ಉದ್ಯೋಗ ಮೇಳಗಳನ್ನು ನಡೆಸಲಾಗಿದೆ. ಇದಕ್ಕಾಗಿ 50ಲಕ್ಷದಿಂದ ಒಂದು ಕೋಟಿವರೆಗೂ ಜಿಲ್ಲೆ, ತಾಲ್ಲೂಕು ಮತ್ತು ರಾಜ್ಯ ಮಟ್ಟದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಈ ಉದ್ಯೋಗ ಮೇಳದಿಂದ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂಬ ಮಾಹಿತಿಯನ್ನು ನೀಡುವಂತೆ ಕುಮಾರಸ್ವಾಮಿ ಸೂಚನೆ ನೀಡಿದರು.
ಜಿಲ್ಲಾ ಮಟ್ಟಗಳಲ್ಲಿರುವ ಕಾರ್ಖಾನೆಗಳ ಜತೆ ಸಮನ್ವಯತೆ ಇಲ್ಲದೆ ಉದ್ಯೋಗ ಮೇಳಗಳನ್ನು ನಡೆಸಿದರೆ ಪ್ರಯೋಜನವಾಗುವುದಿಲ್ಲ. ಇನ್ನು ಮುಂದೆ 15 ದಿನಕ್ಕೊಮ್ಮೆ ಉದ್ಯೋಗ ನೋಂದಣಿ ಜಾರಿಗೆ ತರಬೇಕು. ಜಿಲ್ಲಾಧಿಕಾರಿಗಳು, ಸಿಇಒ, ಎಸ್‍ಪಿ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು. ವಿಕಲ ಚೇತನ ಇಲಾಖೆಯ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿಯೊಂದನ್ನು ರಚಿಸಬೇಕು. ಈ ಸಮಿತಿ ಸ್ಥಳೀಯವಾಗಿ ಕಾರ್ಖಾನೆಗಳು ಮತ್ತು ಔದ್ಯೋಗಿಕ ಸಂಸ್ಥೆಗಳಲ್ಲಿ ಖಾಲಿ ಇರುವ ಉದ್ಯೋಗ ಮಾಹಿತಿಗಳನ್ನು ಪಡೆದುಕೊಂಡು 15 ದಿನಕ್ಕೊಮ್ಮೆ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದರು
ಕೌಶಲ್ಯ ರಹಿತ ಯುವಕರಿಗೆ ಹೆಚ್ಚು ಆದ್ಯತೆ ಕೊಡಬೇಕು. ಈ ಮೂಲಕ ಉದ್ಯೋಗ ಸಮಸ್ಯೆ ನಿವಾರಿಸಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲೆ ಕಿಡಿ:
ಕೇಂದ್ರ ಸರ್ಕಾರದ ಆರ್‍ಟಿಇ ಕಾಯ್ದೆಗಳನ್ನು ಸಮಗ್ರವಾಗಿ ಜಾರಿಗೆ ತರಬೇಕಾದ ಶಿಕ್ಷಣ ಇಲಾಖೆಯ ಬಿಇಒಗಳು ಡಿಡಿಪಿಐಗಳು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಶಾಮೀಲಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿ ಕಾರಿದರು.

ಮಧ್ಯಮ ವರ್ಗದ ಜನರಿಗೂ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಆರ್‍ಟಿಇ ಕಾಯ್ದೆ ಜಾರಿಗೆ ಬಂದಿದೆ. ಆದರೆ, ಅದು ಸಮರ್ಪಕವಾಗಿ ಜಾರಿ ಆಗುತ್ತಿಲ್ಲ. ಖಾಸಗಿ ಶಾಲೆಗಳು ಸರ್ಕಾರದಿಂದಲೂ ಹಣ ಪಡೆದು ಮಕ್ಕಳ ಪೆÇೀಷಕರಿಂದಲೂ ವಂತಿಗೆ ಪಡೆಯುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಜತೆ ಶಾಮೀಲಾಗಿದ್ದಾರೆ. ಈ ನ್ಯೂನ್ಯತೆಯನ್ನು ಸರಿಪಡಿಸಬೇಕಿದೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಹೆಚ್ಚಿಸಲು ಪ್ರಯತ್ನಿಸಬೇಕಿದೆ ಎಂದು ಸಿಎಂ ಸೂಚನೆ ನೀಡಿದರು.
ಕಾಪೆರ್Çೀರೇಟ್ ಕ್ಷೇತ್ರದಂತೆ ಸರ್ಕಾರದ ಕೆಲಸಗಳಾಗಬೇಕು:
ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಅತ್ಯಂತ ಕ್ರಿಯಾ ಶೀಲವಾಗಿ ಕೆಲಸ ಮಾಡಬೇಕು. ಖಾಸಗಿ ವಲಯದ ಕಾಪೆರ್Çೀರೇಟ್ ವಲಯದ ಮಾದರಿಯಲ್ಲಿ ಸರ್ಕಾರದ ಕೆಲಸಗಳು ನಡೆಯಬೇಕು. ಈ ಹಿಂದೆ ಆದ ಸಮಸ್ಯೆಗಳು, ನ್ಯೂನ್ಯತೆಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ನಮ್ಮ ಮುಂದಿನ ಹಾದಿ, ಸಮಸ್ಯೆಗಳು, ಅದಕ್ಕಿರುವ ಪರಿಹಾರದ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕು. ಕೇಂದ್ರ ಸರ್ಕಾರದ ಆರ್ಥಿಕ ನೆರವನ್ನು ಹೆಚ್ಚು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜನ ಸರ್ಕಾರದಿಂದ ಬಯಸುವುದು ಕುಡಿಯುವ ನೀರು, ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗದಂತ ಸೌಲಭ್ಯಗಳನ್ನು. ಅದನ್ನು ನಾವು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿಯಾಗಿ ಇಂದಿಗೆ 21 ದಿನವಾಗಿದೆ. ಈ ಅವಧಿಯಲ್ಲಿ ಪ್ರತಿ ದಿನ 500ರಿಂದ 1000ಜನ ಭೇಟಿ ಮಾಡುವ ಅನಿವಾರ್ಯತೆ ಎದುರಾಗಿದೆ. ಬಹುತೇಕ ಸಮಯವನ್ನು ಜನರ ಭೇಟಿಗಾಗಿಯೇ ಮೀಸಲಿಡುವ ಅನಿವಾರ್ಯತೆ ಇದೆ. ಅಧಿಕೃತವಾಗಿ ಜನತಾದರ್ಶನವನ್ನು ಘೋಷಿಸದೇ ಇದ್ದರೂ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನ ಸಮಸ್ಯೆ ಹೊತ್ತು ನನ್ನನ್ನು ಭೇಟಿ ಮಾಡಲು ಬರುತ್ತಿದ್ದಾರೆ.
ಕೆಳ ಹಂತದಲ್ಲೇ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿದರೆ ಬೆಂಗಳೂರಿನಲ್ಲಿ ನನಗೆ ಹೆಚ್ಚು ಒತ್ತಡ ಆಗುವುದಿಲ್ಲ. ಈ ನಿಟ್ಟಿನಲ್ಲಿ ಇನ್ನು ಮುಂದೆ ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕೆಳ ಹಂತದಲ್ಲೇ ಜನರ ಸಮಸ್ಯೆಯನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಸಚಿವ ಕೃಷ್ಣಬೈರೇಗೌಡ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ