ಔರಂಗಬಾದ್: ಸಾಮಾಜಿಕ ಮಾಧ್ಯಮಗಳಲ್ಲಿನ ನಕಲಿ ಸಂದೇಶಗಳ ಆಧಾರದ ಮೇಲೆ ಗ್ರಾಮಸ್ಥರು ಇಬ್ಬರನ್ನು ಹತ್ಯೆ ಮಾಡಿರುವ ದಾರುಣ ಘಟನೆ ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಜೂನ್ 8ರಂದು ವೈಜಾಪುರ್ ತಾಲೂಕಿನ ಚಂದಗಾಂವನಲ್ಲಿ ಸುಮಾರು 1500 ಗ್ರಾಮಸ್ಥರು, ದರೋಡೆಕೋರರು ಎಂದು ಭಾವಿಸಿ 9 ಜನರ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ಬೆಳಗ್ಗೆ ಗ್ರಾಮದ ಸಮೀಪದ ಫಾರ್ಮ್ ವೊಂದರಲ್ಲಿದ್ದ ಒಂಬತ್ತು ಮಂದಿಯನ್ನು ಎಳೆದು ತಂದು ಸ್ಟಿಕ್ ನಿಂದ ಹೊಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ವಾಟ್ಸ್ ಆಪ್ ನಲ್ಲಿ ಫಾರ್ಮ್ ನಲ್ಲಿ ದರೋಡೆಕೋರರ ಗ್ಯಾಂಗ್ ವೊಂದು ಅಡಗಿ ಕುಳಿತಿದೆ ಎಂಬ ನಕಲಿ ಸಂದೇಶವೇ ಘಟನೆಗೆ ಕಾರಣ ಎಂದು ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ರಾಮ್ ಹರಿ ಯಾದವ್ ಅವರು ತಿಳಿಸಿದ್ದಾರೆ.
ದಾಳಿಯ ನಂತರ ದರೋಡೆಕೋರರ ಗ್ಯಾಂಗ್ ಅನ್ನು ಹಿಡಿದಿರುವುದಾಗಿ ಗ್ರಾಮಸ್ಥರು ಪೊಲೀಸರು ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಒಂಬತ್ತು ಮಂದಿಯನ್ನು ಔರಂಗಬಾದ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜೂನ್ 9ರಂದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು 400 ಗ್ರಾಮಸ್ಥರ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ.