ಬಿಜೆಪಿ ನನ್ನ ಪಕ್ಷ ಇರಬಹುದು ಆದರೆ, ಆರ್‌ಜೆಡಿ ನನ್ನ ಕುಟುಂಬವಿದ್ದಂತೆ; ಬಿಜೆಪಿ ಸಂಸದ ಹಿರಿಯ ನಟ ಶತೃಘ್ನಸಿನ್ಹಾ

ಪಾಟ್ನಾ: ಜೂ-14: ಬಿಜೆಪಿ ನನ್ನ ಪಕ್ಷ ಇರಬಹುದು ಆದರೆ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಮತ್ತವರ ಸಂಬಂಧಿಗಳು ನನಗೆ ಕುಟುಂಬ ಸಮಾನರು ಎಂದು ಬಿಜೆಪಿ ಅತೃಪ್ತ ನಾಯಕ, ಸಂಸದ ಬಾಲಿವುಡ್‌ ಹಿರಿಯ ನಟ ಶತ್ರುಘ್ನ ಸಿನ್ಹಾ ಖಡಕ್‌ ಆಗಿ ಹೇಳಿಕೆ ನೀಡಿದ್ದಾರೆ.

ಆರ್‌ಜೆಡಿ ಪಕ್ಷ ಹಮ್ಮಿಕೊಂಡಿದ್ದ ಇಫ್ತಾರ್‌ ಕೂಟದಲ್ಲಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಪಾಲ್ಗೊಂಡಿದ್ದರು, ಈ ಬಗ್ಗೆ ಮಾತನಾಡಿರುವ ಅವರು, ಲಾಲೂಜಿ, ರಾಬ್ರಿ, ತೇಜಸ್ವಿ, ತೇಜ್‌‌, ಮಿಶಾ ಇವರೆಲ್ಲರೂ ನನ್ನ ಕುಟುಂಬದ ಸ್ನೇಹಿತರು. ಅವರ ಆಹ್ವಾನದ ಮೇರೆಗೆ ನಾನಿಲ್ಲಿಗೆ ಬಂದಿದ್ದೇನೆ. ಅದು ಬಿಜೆಪಿ ನನ್ನ ಪಕ್ಷವಾಗಿರಬಹುದು. ಆದರೆ, ಇವರೆಲ್ಲರೂ ನನ್ನ ಕುಟುಂಬ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಬಿಜೆಪಿಯ ರಾಜಕೀಯ ವಿರೋಧಿ ಆರ್‌ಜೆಡಿ ಇಫ್ತಾರ್‌ ಕೂಟದಲ್ಲಿ ಭಾಗವಹಿಸುವ ಮೂಲಕ ಸಂಸದ ಶತ್ರುಘ್ನ ಸಿನ್ಹಾ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಲ್ಲದೇ, ಲಾಲೂ ಕುಟುಂಬದ ಪರ ನೀಡಿರುವ ಈ ಹೇಳಿಕೆ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದಂತಾಗಿದೆ.

ಕೆಲ ದಿನಗಳಿಂದ ಸಿನ್ಹಾ ಅವರು ಬಿಜೆಪಿ ನಾಯಕತ್ವ ಕುರಿತಂತೆ ಹಾಗೂ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕುರಿತು ವಿರೋಧ ಹಾಗೂ ಟೀಕೆಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ, ಸಿನ್ಹಾ ಅವರು ಆರ್’ಜೆಡಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆಂಬ ಸುದ್ದಿಗಳು ಹರಡುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ