
ಶಿರಸಿ :
ಯಕ್ಷಸಿಂಹ ಖ್ಯಾತಿಯ ದಿ. ಕೃಷ್ಣ ಹಾಸ್ಯಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬುಧವಾರ ನೆಮ್ಮದಿ ಕುಟೀರದಲ್ಲಿ ಕೃಷ್ಣ ಹಾಸ್ಯಗಾರರ ಯಕ್ಷಗಾನ ಅಭಿಮಾನಿಗಳು ಯಕ್ಷಶುಭೋದಯದ ಆಶ್ರಯದಲ್ಲಿ ಸಭೆ ಸೇರಿ ಶೃದ್ಧಾಂಜಲಿ ಸಲ್ಲಿಸಿದರು.
ಕೃಷ್ಣಹಾಸ್ಯಗಾರರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಆರಂಭವಾದ ಸಭೆಯಲ್ಲಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮೌನಾಚರಣೆ ಮಾಡಲಾಯಿತು. ಯಕ್ಷಶುಭೋದಯದ ಅಧ್ಯಕ್ಷ ಡಾ|| ಜಿ. ಎ. ಹೆಗಡೆ ಸೋಂದಾ ಸ್ವಾಗತಿಸಿ ಪ್ರಸ್ತಾಪಗೈದು ಮಾತನಾಡಿ, ಕಕರ್ಿ ಪರಂಪರೆಯಲ್ಲಿ ಮೂಡಿ ಬಂದ ಶ್ರೇಷ್ಠ ಕಲಾವಿದರಲ್ಲಿ ಕೃಷ್ಣ ಹಾಸ್ಯಗಾರರು ಅದ್ವಿತೀಯರು. ಸಿಂಹ ನೃತ್ಯ ಮತ್ತು ಪ್ರೇತ ನೃತ್ಯದಿಂದ ರಾಷ್ಟ್ರಮಟ್ಟದಲ್ಲಿ ಘನವೆತ್ತ ಕಲಾವಿದರಾಗಿ ಹೆಸರು ಪಡೆದು ಇದೀಗ ಮಾಯವಾಗಿದ್ದಾರೆ ಎಂದರು. ಕರ್ಕಿ ಹಾಸ್ಯಗಾರರ ದುರ್ಗಾಂಬಾ ಯಕ್ಷಗಾನ ಮಂಡಳಿಯು ತುಂಬಾ ಶಾಸ್ತ್ರಬದ್ಧವಾಗಿ ಯಕ್ಷಗಾನೀಯ ಚೌಕಟ್ಟಿನಲ್ಲಿ ನಡೆಸಿಕೊಡುತ್ತಿದ್ದ ಮಾಗಧವಧೆ, ಶಬರಾರ್ಜುನ, ಜಾಂಬವತಿ ಪರಿಣಯ, ಐರಾವತ ಮುಂತಾದ ಪ್ರಸಂಗಗಳಲ್ಲಿಯ ಕೃಷ್ಣ ಹಾಸ್ಯಗಾರರ ವಿಶಿಷ್ಟ ಪಾತ್ರಗಳನ್ನು ಸ್ಮರಿಸಿದರು. ಪುರಷಾಮೃಗ ಮತ್ತು ಶಬರಿಯ ಪಾತ್ರ ಅವರ ವಿಶಿಷ್ಟ ಪಾತ್ರವಾಗಿ ಕಲಾಭಿಮಾನಿಗಳ ಮನದಲ್ಲಿ ನೆಲೆಯೂರಿರುವುದು ಅವರ ಕಲಾಕೌಶಲ್ಯ ಮತ್ತು ಕಲಾ ಕೌತುಕಕ್ಕೆ ಸಾಕ್ಷಿಯಾಗಿದೆ. ಅವರು ಚಿತ್ರಕಲಾ ಶಿಕ್ಷಕರಾಗಿ, ಉತ್ತಮ ವ್ಯಕ್ತಿಯಾಗಿ ಸಭ್ಯ ಸುಸಂಸ್ಕೃತ ಕಲಾವಿದರಾಗಿದ್ದರು ಎಂದರು.
ಕರ್ಕಿ ಯಕ್ಷಗಾನ ಪರಂಪರೆಯಲ್ಲಿ ಯಕ್ಷಗಾನ ಕಲಿತು ಹಾಸ್ಯಗಾರ ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆತ ತಮ್ಮ ಅನುಭವವನ್ನು ಶ್ರೀಧರ ಹೆಗಡೆ ನಕ್ಷೆಯವರು ಭಾವಪೂರ್ಣವಾಗಿ ಹಂಚಿಕೊಂಡರು.
ಸಾಮಾಜಿಕ ಧುರೀಣರಾದ ನಾಡಗುಳಿ ವಿಶ್ವನಾಥ ಶರ್ಮರು ಶ್ರದ್ಧಾಂಜಲಿ ಸಲ್ಲಿಸುತ್ತಾ ಕರ್ಕಿ ಪರಂಪರೆ ಎಂಬುದು ಲೋಕಪ್ರಸಿದ್ಧ. ಇಡೀ ಕುಟುಂಬವೇ ಯಕ್ಷಗಾನದಲ್ಲಿ ತೊಡಗಿಕೊಂಡು ಎಲ್ಲರೂ ಸಜ್ಜನ ಸಾತ್ವಿಕ ಕಲವಿದರಾಗಿ ಪಾತ್ರಸ್ಮರಣೀಯರಾಗಿರುವುದು ಯಕ್ಷಗಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯಾಗಿದೆ ಎಂದರು. ವೆಂಕಟ್ರಮಣ ಹೆಗಡೆ ಹೊನ್ನೆಗದ್ದೆ ಮತ್ತು ಕೃಷ್ಣ ಹೆಗಡೆ ಹೊನ್ನೆಗದ್ದೆ ಅವರು ಹಾಸ್ಯಗಾರರ ಗುಣಗಾನ ಮಾಡಿ ಅವರೊಡನೆ ತಮಗಿದ್ದ ಒಡನಾಟವನ್ನು ಆತ್ಮೀಯವಾಗಿ ಸ್ಮರಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಜನಮಾಧ್ಯಮ ದಿನಪತ್ರಿಕೆ ಸಂಪಾದಕ ಅಶೋಕ ಹಾಸ್ಯಗಾರ ಅವರು ಶೃದ್ಧಾಂಜಲಿ ಸಲ್ಲಿಸಿ ಕರ್ಕಿ ಪರಂಪರೆಯ ಕಲಾವಿದರು ಶ್ರೇಷ್ಠತೆ ಮೆರೆದವರು. ಕಲೆಯಲ್ಲಿ ಗುಣಾತ್ಮಕತೆಯನ್ನು ಉಳಿಸಿ ಬೆಳೆಸಿ ಅದರ ಸಂವರ್ಧಿಸಿ ಕಲೆಯ ಘನತೆಯನ್ನು ಎತ್ತಿ ಹಿಡಿದು ಮನೆ ಮಾತಾದವರು. ಭರತನಾಟ್ಯ ಶಾಸ್ತ್ರವನ್ನು ಗಂಭೀರವಾಗಿ ಚಿಂತನೆಗೆ ಒಡ್ಡಿ ಯಕ್ಷಗಾನದಲ್ಲಿ ಸೂಕ್ತವಾಗಿ ಅಳವಡಿಸಿಕೊಂಡ ಕಲಾವಿದರು. ಹೀಗಾಗಿ ಕೃಷ್ಣ ಹಾಸ್ಯಗಾರರ ಹಾಸ್ಯಪಾತ್ರಗಳು ಸಿಂಹ ನೃತ್ಯ, ಪುರುಷಾಮೃಗ, ಪ್ರೇತ ನೃತ್ಯ ಖ್ಯಾತಿಗೆ ಬರುವಲ್ಲಿ ಕೊಡುಗೆ ನೀಡಿದರು ಎಂದು ವಿಶ್ಲೇಷಿಸಿದರು. ಕಕರ್ಿ ಪರಂಪರೆಯನ್ನು ಉಳಿಸಿ ಮುಂದಿನ ಅಧ್ಯಯನಕ್ಕೆ ದಾಖಲಿಸಬೇಕಾದ್ದು ಅತ್ಯವಶ್ಯ ಎಂದು ತಿಳಿಸಿದರು.
ಕಕರ್ಿ ಹಾಸ್ಯಗಾರ ಮಂಡಳಿಯ ಕಲಾವಿದರನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಗುರುತಿಸದಿರುವುದು ಕಲೆಯ ದುರಂತ. ಹಾಗಾಗಿ ದಿ|| ಕೃಷ್ಣ ಹಾಸ್ಯಗಾರರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಸಭೆ ಒಕ್ಕೊರಲಿನಿಂದ ಆಶಿಸಿತು.
ವಿ.ಪಿ. ಹೆಗಡೆ ವೈಶಾಲಿ, ಬಿ. ಸಿ. ನಾಯ್ಕ, ಅರಸಿ ಉಮೇಶ ಕೆ. ದೈವಜ್ಞ (ವಕೀಲರು) ಪ್ರಭಾಕರ ಹೆಗಡೆ ಕೆಂಚಗದ್ದೆ, ಸತ್ಯನಾರಾಯಣ ಅಗ್ನಿಹೋತ್ರಿ, ಹರ್ಷ ಹೆಗಡೆ, ಸಣ್ಣಳ್ಳಿ ಮೊದಲಾದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.