ಅಣ್ಣಾಡಿಎಂಕೆಯ 18 ಶಾಸಕರ ಅನರ್ಹತೆ ಪ್ರಕರಣ: ಸ್ಪೀಕರ್ ಆದೇಶ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ:ಜೂ-14: ಅಣ್ಣಾಡಿಎಂಕೆಯ 18 ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್‌ ಆದೇಶ ಪ್ರಶ್ನಿಸಿ, ಟಿಟಿವಿ ದಿನಕರನ್ ಬೆಂಬಲಿಗ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌‌ ಸ್ಪೀಕರ್‌‌‌ ಆದೇಶವನ್ನು ಎತ್ತಿ ಹಿಡಿದಿದೆ.

ಈ ಮೂಲಕ ಪಳನಿಸ್ವಾಮಿ ಸರ್ಕಾರಕ್ಕೆ ಬಿಗ್‌ ರಿಲೀಫ್‌ ಸಿಕ್ಕಿದೆ. ಹೈಕೋರ್ಟ್‌ನ ಈ ತೀರ್ಪಿನಿಂದ ಸಧ್ಯದ ಮಟ್ಟಿಗೆ  ತಮಿಳುನಾಡು ಸರ್ಕಾರ ಬಹುಮತಸಾಬೀತು ಪಡಿಸಬೇಕಾದ ಸಂದರ್ಭದಿಂದ ಪಾರಾಗಿದೆ.

ಕಳೆದ ಆಗಸ್ಟ್‌ನಲ್ಲಿ ದಿನಕರನ್‌ ಬೆಂಬಲಕ್ಕೆ ನಿಂತಿದ್ದ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದರು. ಇದರಿಂದ ಎಐಎಡಿಎಂಕೆ ಪಕ್ಷದ ವಿರುದ್ಧ ಶಾಸಕರು ನಡೆದುಕೊಂಡ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆ ಸ್ಪೀಕರ್‌ 18 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

ಸ್ಪೀಕರ್‌ ಅವರ ಈ ನಿಲುವನ್ನು ಖಂಡಿಸಿದ ಶಾಸಕರು, ಸಭಾಧ್ಯಕ್ಷರ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌ ದ್ವಿಸದಸ್ಯ ಪೀಠ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ, ಇಬ್ಬರು ನ್ಯಾಯಾಧೀಶರ ತೀರ್ಪಿನಲ್ಲಿ ಭಿನ್ನ ಆದೇಶ ಬಂದಿರುವುದರಿಂದ ವಿಚಾರಣೆಯನ್ನು ಮೂರನೇ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಮತ್ತೊಮ್ಮೆ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ತ್ರಿಸದಸ್ಯ ಪೀಠ ನೀಡುವ ತೀರ್ಪು ಅಂತಿಮವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ