ಬೆಂಗಳೂರು, ಜೂ.12- ಕಳೆದ 20 ವರ್ಷಗಳಿಂದ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದು ನಿಜ. ನಾನು ಶುದ್ಧ ಹಸ್ತ, ಅಪರಂಜಿ, 24 ಕ್ಯಾರೆಟ್ ಗೋಲ್ಡ್ ಎಂದು ಹೇಳಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಹೇಳಿದರು.
ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರದ ಒಳಗೆ ಅಥವಾ ಹೊರಗಿರಲಿ ವಾಸ್ತವತೆಯನ್ನು ಮಾತನಾಡಬೇಕು. ಎಲ್ಲವೂ ಫಸ್ಟ್‍ಕ್ಲಾಸ್ ನಡೆಯುತ್ತಿದೆ ಎಂದು ಹೇಳುವುದು ನಮಗೆ ನಾವೇ ದಟ್ಟತನ ತೋರಿಕೊಂಡಂತೆ. ನಾನು ಅಪರಂಜಿ, ಯಾವುದೇ ತಪ್ಪು ಮಾಡಿಲ್ಲ, 24 ಕ್ಯಾರೆಟ್ ಎಂದು ಹೇಳಿಕೊಂಡರೆ ಅದು ಆತ್ಮವಂಚನೆಯಾಗುತ್ತದೆ. ಸಂಪೂರ್ಣವಾಗಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂಬುದು ಸುಲಭದ ಮಾತಲ್ಲ. ಭ್ರಷ್ಟಾಚಾರ ಎಂಬುದು ಎಲ್ಲಾ ಇಲಾಖೆಗಳಲ್ಲೂ ಹರಡಿದೆ. ಈಗ ಅಧಿಕಾರಕ್ಕೆ ಬಂದವರು ಪರಿಸ್ಥಿತಿಯನ್ನು ಸುಧಾರಿಸುವ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಎಂದರು.
ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅತ್ಯಂತ ನುರಿತ ಆಡಳಿತಗಾರರು ಎಂದು ಹೇಳಿದ ಅವರು, ಅಧಿಕಾರಿಗಳ ವರ್ಗಾವಣೆಗೆ ಮಧ್ಯವರ್ತಿಗಳು ವಿಧಾನಸೌಧದ ಕಾರಿಡಾರ್‍ನಲ್ಲಿ ತಿರುಗಾಡುತ್ತಿರಬಹುದು. ಆದರೆ ವಿಕಾಸಸೌಧದಲ್ಲಿ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಹಾಸ್ಯ ಚಟಾಕಿ ಹಾರಿಸಿದರು.