ಚಾರ್ಮಾಡಿ ಘಾಟ್ ವಾಹನ ಸಂಚಾರ ಎರಡು ದಿನ ಬಂದ್

ಬೆಳ್ತಂಗಡಿ:

ಭಾರೀ ಮಳೆಯ ಕಾರಣದಿಂದ ಸೋಮವಾರ ಚಾರ್ಮಾಡಿ ಘಾಟಿಯ ಕೆಲವು ಕಡೆಗಳಲ್ಲಿ ಗುಡ್ಡಕುಸಿತ ಮತ್ತು ಮರಗಳು ಉರುಳಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಬಳಿಕ ಸೋಮವಾರ ತಡರಾತ್ರಿ ಮತ್ತೆ ರಸ್ತೆಗಳ ಮೇಲೆ ಭಾರೀ ಮಣ್ಣು ಕುಸಿದಿದ್ದರಿಂದ ಘಾಟಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ರಸ್ತೆಗೆ ಬಿದ್ದಿದ್ದ ಮಣ್ಣಿನ ರಾಶಿ ಮತ್ತು ಮರಗಳನ್ನು ತೆರವುಗೊಳಿಸುವ ಕೆಲಸ ಭರದಿಂದ ಸಾಗಿತು. ಹಸನಬ್ಬ ಚಾರ್ಮಾಡಿ ಮತ್ತು ಅವರ ತಂಡ ಜೆ.ಸಿ.ಬಿ.ಗಳ ಸಹಾಯದಿಂದ ತಡೆ ತೆರವು ಕಾರ್ಯಾಚರಣೆ ನಡೆಸಿದರೆ ಧರ್ಮಸ್ಥಳ ಮತ್ತು ಬೆಳ್ತಂಗಡಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಘಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಇದೇ ಸಂದರ್ಭದಲ್ಲಿ ಘಾಟಿ ನಡುವೆ ವಾಹನಗಳಲ್ಲಿ ಬಾಕಿಯಾಗಿದ್ದ ಪ್ರಯಾಣಿಕರಿಗೆ ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ಮತ್ತು ಪ್ರಾಯದ ವ್ಯಕ್ತಿಗಳಿಗೆ ಕುಡಿಯುವ ನೀರು ಹಾಗೂ ಬಿಸ್ಕತ್ ಪೊಟ್ಟಣಗಳನ್ನು ವಿತರಿಸಲಾಯಿತು. ಚಾರ್ಮಾಡಿ ಸಂಘ ಪರಿವಾರದ ಕಾರ್ಯಕರ್ತರೂ ಸಹ ತೊಂದರೆಯಲ್ಲಿ ಸಿಲುಕಿದ ಪ್ರಯಾಣಿಕರಿಗೆ ಆಹಾರ ವಿತರಿಸುವ ಕಾರ್ಯ ನಡೆಸಿದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರೀಶ್ ಪೂಂಜ, ಚಿಕ್ಕಮಗಳೂರು ಎಸ್ಪಿ ಆಣ್ಣಾಮಲೈ, ಬೆಳ್ತಂಗಡಿ ಸರ್ಕಲ್ ಇನ್ ಸ್ಪೆಕ್ಟರ್ ಸಂದೇಶ್ ಪಿ.ಜಿ., ಬೆಳ್ತಂಗಡಿ ತಹಸೀಲ್ದಾರ್, ಸಂಚಾರ ಠಾಣೆ ಸಿಬ್ಬಂದಿ, ಅಗ್ನಿಶಾಮಕದಳದ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಮತ್ತು ಸ್ಥಳೀಯರು ಮಂಗಳವಾರ ಪೂರ್ತಿ ಘಟನಾ ಸ್ಥಳದಲ್ಲಿ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ