ಸಿಂಗಪುರ್, ಜೂ. 11-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಸಿಂಗಪುರ್ ಪ್ರಧಾನಮಂತ್ರಿ ಲೀ ಹೀಸಿನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು.
ಸಿಂಗಪುರ್ನಲ್ಲಿ ನಾಳೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರೊಂದಿಗೆ ಟ್ರಂಪ್ ಅವರ ಐತಿಹಾಸಿಕ ಶೃಂಗಸಭೆಗೆ ಮುನ್ನ ಇಂದು ಮಹತ್ವದ ಬೆಳವಣಿಗೆಗಳು ಕಂಡುಬಂದವು.
ಟ್ರಂಪ್ ಸಿಂಗಪುರ್ ಪ್ರಧಾನಿ ಅವರೊಂದಿಗೆ ಭೋಜನಕೂಟದಲ್ಲಿ ಪಾಲ್ಗೊಂಡರು. ಬಳಿಕ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಅಮೆರಿಕ ಅಧ್ಯಕ್ಷರು, ವಿದೇಶಾಂಗ ಕಾರ್ಯದರ್ಶಿ, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈಗಾಗಲೇ ಸಿಂಗಪುರ್ನಲ್ಲಿ ನಾಳೆಯ ಚಾರಿತ್ರಿಕ ಶೃಂಗಸಭೆಗೆ ಪೂರ್ವಭಾವಿ ಸಿದ್ದತೆಗಳನ್ನು ನಡೆಸುತ್ತಿದ್ದಾರೆ.
ದಕ್ಷಿಣ ಕೊರಿಯಾಕ್ಕೆ ಅಮೆರಿಕದ ಮಾಜಿ ರಾಯಭಾರಿ ಹಾಗೂ ಉತ್ತರ ಕೊರಿಯಾದೊಂದಿಗೆ ಅಣ್ವಸ್ತ್ರ ಸಂಧಾನಕಾರ ಸಂಗ್ ಕಿಮ್ ಅವರ ನೇತೃತ್ವದ ಅಮೆರಿಕ ನಿಯೋಗ ಸಿಂಗಪುರ್ನ ರಿಟ್ಜ್ ಕಾರ್ಲ್ಟನ್ ಹೊಟೇಲ್ನಲ್ಲಿ ಉತ್ತರ ಕೊರಿಯಾ ಕಾರ್ಯನಿರ್ವಹಣಾ ಸಮೂಹದೊಂದಿಗೆ ಸಮಾಲೋಚನೆ ನಡೆಸಲಿದೆ.