
ನವದೆಹಲಿ, ಜೂ.11-ಭಾರತದ ಮೇಲೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸದಾ ಹವಣಿಸುತ್ತಿರುವ ಪಾಕಿಸ್ತಾನ ಬೆಂಬಲಿತ ಜೈಷ್-ಎ-ಮಹಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‍ಇಟಿ) ಹಾಗೂ ಹಿಜ್‍ಬುಲ್ ಮುಜಾಹಿದ್ದೀನ್(ಎಚ್‍ಎಂ) ಭಯೋತ್ಪಾದನೆ ಸಂಘಟನೆಗಳು ಈಗ ಒಗ್ಗೂಡಿ ದೊಡ್ಡ ಮಟ್ಟದಲ್ಲಿ ದಾಳಿಗಳನ್ನು ನಡೆಸಲು ಹುನ್ನಾರ ನಡೆಸಿರುವ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ.
ಜೈಷ್, ಲಷ್ಕರ್ ಮತ್ತು ಹಿಜ್‍ಬುಲ್ ಸಂಘಟನೆಗಳು ಪಾಕಿಸ್ತಾನದ ಖೈಬರ್ ಪಾಖ್ತುನ್‍ಕ್ವಾ ಪ್ರದೇಶದಲ್ಲಿ ಭಾರತದ ಮೇಲೆ ಒಗ್ಗೂಡಿ ದಾಳಿ ನಡೆಸಲು ಈಗಾಗಲೇ ರಹಸ್ಯ ಸಭೆಗಳನ್ನು ನಡೆಸಿರುವ ವಿಷಯ ಬಯಲಾಗಿದೆ.
ಜೆಎಎಂ ಉಗ್ರರ ಚಟುವಟಿಕೆಗಳು ತೀವ್ರಗೊಂಡಿದ್ದು, 2017ರಲ್ಲಿ ಎಂಟು ಯೋಧರು ಬಲಿಯಾದ ಪಲ್ವಾಮಾ ಪೆÇಲೀಸ್ ಠಾಣೆ ಮೇಲೆ ನಡೆದ ದಾಳಿಗೆ ಜೆಇಎಂ ಕಾಶ್ಮೀರ ಘಟಕದ ಉಗ್ರಗಾಮಿ ನಾಯಕ ಮಫ್ತಿ ವಖಸ್ ಕಾರಣ ಎಂಬ ಸಂಗತಿಯನ್ನು ಶ್ರೀನಗರ ಮೂಲದ ಬಂಧಿತ ಜೈಷ್ ಭಯೋತ್ಪಾದಕರ ಅಶಿಕ್ ಬಾಬಾ ಬಹಿರಂಗಗೊಳಿಸಿದ್ದಾನೆ.
ನಗ್ರೋಟಾದ ಸೇನಾ ಶಿಬಿರದ ಮೇಲೆ ಇತ್ತೀಚೆಗೆ ನಡೆದ ದಾಳಿ ಸಂಬಂಧ ಬಾಬಾನನ್ನು ಬಂಧಿಸಲಾಗಿತ್ತು. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅನೇಕ ಆಘಾತಕಾರಿ ಸುದ್ದಿಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಕಾಶ್ಮೀರ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪಾಕಿಸ್ತಾನ ಜೆಇಎಂ ಕ್ಯಾಂಪಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಬಾಬಾ, ಜೈಷ್ ಮುಖಂಡ ಮೌಲಾನಾ ಮಸೂದ್ ಅಜರ್‍ಗೆ ನಿಕಟವಾಗಿದ್ದ ಇತರ ನಾಯಕರನ್ನು ಭೇಟಿ ಮಾಡಿ ಮಹತ್ವದ ಮಾಹಿತಿ ಮತ್ತು ಸಂದೇಶಗಳನ್ನು ರವಾನಿಸುತ್ತಿದ್ದ.
ಎಲ್‍ಇಟಿ ಮತ್ತು ಎಚ್‍ಎಂ ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿರುವ ಪಾಕಿಸ್ತಾನದ ಖೈಬರ್ ಪಾಖ್ತುನ್‍ಕ್ವಾ ಪ್ರದೇಶದಲ್ಲೇ, ಜೈಷ್‍ನ ಉಗ್ರ ತರಬೇತಿ ಶಿಬಿರವಿದೆ. ಈ ಮೂರು ಸಂಘಟನೆಗಳು ಈಗ ಭಾರತದ ವಿವಿಧ ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಲು ಗೋಪ್ಯ ಸಭೆಗಳನ್ನು ನಡೆಸಿ ಕುತಂತ್ರ ರೂಪಿಸಿವೆ ಎಂದು ಆತ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಈ ವರ್ಷ ಮಾರ್ಚ್‍ನಲ್ಲಿ ಕುಖ್ಯಾತ ಭಯೋತ್ಪಾದಕ ಮಫ್ತಿ ವಖಸ್ ಎನ್‍ಕೌಂಟರ್‍ನಲ್ಲಿ ಹತನಾದ. ಈತ ಫೆ.11, 2018ರಂದು ಸಂಜುವಾನ್ ಸೇನಾ ಶಿಬಿರದ ಮೇಲೆ ದಾಳಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈ ದಾಳಿಯಲ್ಲಿ ಸೇನಾಧಿಕಾರಿಯೊಬ್ಬರು ಹುತಾತ್ಮರಾದರು.
ಪಾಕಿಸ್ತಾನಕ್ಕೆ ಆಗಾಗ ಬಾಬಾ ಭೇಟಿ ನೀಡಿ ಜೈಷ್‍ನ ಅಗ್ರ ನಾಯಕರನ್ನು ಭೇಟಿಯಾಗಿ ಅವರಿಂದ ಸಂದೇಶ ಪಡೆದು ಭದ್ರತಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಕುಮ್ಮಕ್ಕು ನೀಡುತ್ತಿದ್ದ ಸಂಗತಿ ಈಗ ಬಹಿರಂಗಗೊಂಡಿದೆ.