ಪಾಕಿಸ್ತಾನದ ಜೈಲೊಂದರಲ್ಲಿ ಗುಜರಾತ್‍ನ ಮೀನುಗಾರನೊಬ್ಬ ಮೃತ

ವಡೋದರ(ಗುಜರಾತ್), ಜೂ.11-ಪಾಕಿಸ್ತಾನದ ಜೈಲೊಂದರಲ್ಲಿ ಗುಜರಾತ್‍ನ ಮೀನುಗಾರನೊಬ್ಬ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದೆಯೇ ಆತ ಸಾವಿಗೀಡಾದ ಸುದ್ದಿ ಕುಟುಂಬದವರಿಗೆ ಈಗ ತಿಳಿದಿದೆ.
ಗುಜರಾತ್‍ನ ಗಿರ್ ಸೋಮನಾಥ್‍ನ ಕೊಟಡ ಗ್ರಾಮದ ದೇವ ರಾಮ ಬರೈಯಾ(55) ಪಾಕಿಸ್ತಾನದ ಬಂದರು ನಗರಿ ಕರಾಚಿ ಜೈಲಿನಲ್ಲಿ ಕೊನೆಯುಸಿರೆಳೆದಿದ್ದಾರೆ. ದೇವ ರಾಮ್‍ಗೆ ಪತ್ನಿ ಕಸ್ತೂರಿಬೆನ್ ಹಾಗೂ ಆರು ಮಂದಿ ಮಕ್ಕಳಿದ್ದಾರೆ. ಪಾಕಿಸ್ತಾನ ಜಲ ಗಡಿ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಪಾಕಿಸ್ತಾನ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಈತನನ್ನು ಬಂಧಿಸಿ ಫೆಬ್ರವರಿ 2ರಂದ ಕರಾಚಿ ಜೈಲಿಗೆ ಕಳುಹಿಸಿತ್ತು.
ದೇವ ರಾಮ್‍ನೊಂದಿಗೆ ಜೈಲಿನಲ್ಲಿದ್ದ ಸಹ ಕೈದಿ ಪ್ರವೀಣ್ ಧನುಷ್ಕ್ ಚಾವ್ಡಾ ಈ ಸಂಬಂಧ ಏಪ್ರಿಲ್ 22ರಂದು ಆತನ ಕುಟುಂಬಕ್ಕೆ ಪತ್ರ ಬರೆದು ಮಾರ್ಚ್ 4ರಂದು ಆತ ಅಸುನೀಗಿರುವುದಾಗಿ ತಿಳಿಸಿದ್ದ.
ಈ ಪತ್ರ ನಿನ್ನೆ ದೇವ ರಾಮ್ ಕುಟುಂಬದವರಿಗೆ ತಲುಪಿದ ನಂತರ ವಿಷಯ ತಿಳಿಯಿತು ಎಂದು ಕೊಟಡ ಗ್ರಾಮದ ಮುಖ್ಯಸ್ಥ ಬಾಬುಭಾಯ್ ಸೋಮಭಾಯ್ ತಿಳಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಗುಜರಾತ್ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವೆಲ್ಜಿಭಾಯ್ ಮಸಾನಿ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ