ಆಗ್ರಾ, ಜೂ.11-ವಿದ್ಯಾರ್ಥಿಗಳ ಗುಂಪಿನ ಮೇಲೆ ಬಸ್ ಹರಿದು ಶಿಕ್ಷಕ ಸೇರಿ ಏಳು ಮಂದಿ ಮೃತಪಟ್ಟ ದುರಂತ ಉತ್ತರ ಪ್ರದೇಶದ ಕನ್ನೌಜ್‍ನ ಲಕ್ನೋ-ಆಗ್ರಾ ಎಕ್ಸ್‍ಪ್ರೆಸ್‍ವೇನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿದ್ದಾರೆ.
ಬಿಟಿಸಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹರಿದ್ವಾರಕ್ಕೆ ತೆರಳುತ್ತಿದ್ದಾಗ 4ರ ನಸುಕಿನಲ್ಲಿಈ ಘಟನೆ ಸಂಭವಿಸಿದೆ. ತಾವು ಸಂಚರಿಸುತ್ತಿದ್ದ ಬಸ್‍ನಿಂದ ಮತ್ತೊಂದು ವಾಹನಕ್ಕೆ ಡೀಸೆಲ್ ತುಂಬಿಸುತ್ತಿದ್ದಾಗ ಕೆಲವು ವಿದ್ಯಾರ್ಥಿಗಳು ಕೆಳಕ್ಕೆ ಇಳಿದರು. ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ಉತ್ತರಪ್ರದೇಶ ರೋಡ್‍ವೇಸ್ ಬಸ್ ಅವರ ಮೇಲೆ ಹರಿಯಿತು. ಕನ್ನೌಜ್ ಜಿಲ್ಲೆಯ ತಿರ್ವಾ ಪ್ರದೇಶದಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ಮೃತಪಟ್ಟ ವಿದ್ಯಾರ್ಥಿಗಳೆಲ್ಲರೂ ಸಂತ ಕಬೀರ್ ಜಿಲ್ಲೆಯವರಾಗಿದ್ದು ಸುಮಾರು 20ರ ವಯೋಮಾನದವರಾಗಿದ್ದಾರೆ.
ಈ ದುರಂತದಲ್ಲಿ ಓರ್ವ ಶಿಕ್ಷಕ ಹಾಗೂ ಆರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರು ಎಂದು ಪೆÇಲೀಸರು ತಿಳಿಸಿದ್ದಾರೆ. ಅಪಘಾತದ ನಂತರ ಚಾಲಕ ಬಸ್ಸಿನೊಂದಿಗೆ ಪರಾರಿಯಾಗಿದ್ಧಾನೆ. ಆತನ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿದೆ. ತೀವ್ರ ಗಾಯಗೊಂಡ ಇತರ ಮೂವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದುರ್ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಗಾಗಿ ತಲಾ 50,000 ಪರಿಹಾರ ಪ್ರಕಟಿಸಲಾಗಿದೆ.