ಕೇರಳದ ವಿವಿಧೆಡೆ ವರುಣನ ರುದ್ರಾವತಾರ 18 ಮಂದಿ ಮೃತ

ತಿರುವನಂತಪುರಂ, ಜೂ.11- ಕೇರಳದ ವಿವಿಧೆಡೆ ವರುಣನ ರುದ್ರಾವತಾರ ಮುಂದುವರಿದಿದ್ದು, ಈವರೆಗೆ ಧಾರಾಕಾರ ಮಳೆಗೆ 18 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.
ಭಾರೀ ಮಳೆಯಿಂದಾಗಿ 188.41 ಹೆಕ್ಟೇರ್ ಪ್ರದೇಶದ 6.84 ಕೋಟಿ ಬೆಳೆ ಹಾನಿಯಾಗಿದೆ. ಅಲ್ಲದೆ, ವರ್ಷಧಾರೆಯಿಂದ 1109 ಮನೆಗಳು ಭಾಗಶಃ ಹಾನಿಗೀಡಾಗಿದ್ದು, 61 ಮನೆಗಳು ಸಂಪೂರ್ಣ ಕುಸಿದಿವೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದ್ದಾರೆ.
ಕುಂಭದ್ರೋಣ ಮಳೆಯ ಪ್ರಕೋಪಕ್ಕೆ ರಾಜ್ಯದ 2784 ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ತಿರುವನಂತಪುರಂ ಮತ್ತು ಅಳಪುಳ್ಳ ಜಿಲ್ಲೆಗಳಲ್ಲಿ ಮಳೆಯಿಂದ ಹೆಚ್ಚು ಸಾವು-ನೋವು ಸಂಭವಿಸಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ತೀವ್ರಗೊಂಡಿದ್ದು, ನದಿಗಳು ಭೋರ್ಗರೆಯುತ್ತಿವೆ.
ಪ್ರವಾಹದಲ್ಲಿ ಸಿಲುಕಿದ್ದ 32 ಕುಟುಂಬಗಳ 122 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಮಳೆಯಿಂದಾಗಿ ಇಡುಕ್ಕಿ, ಕಲ್ಲಿಕೋಟೆ, ಕಲ್ಲೂರು ಜಿಲ್ಲೆಗಳಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಅನೇಕ ಕಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಮನೆಗಳು ಕುಸಿದು ಬಿದ್ದಿವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಸಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ